
ಬೆಂಗಳೂರು, ಜ. 30: ರಾಜ್ಯ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನವನ್ನು ಫೆಬ್ರವರಿ 4ರವರೆಗೆ, ಅಂದರೆ ಇನ್ನೂ ನಾಲ್ಕು ದಿನಗಳ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ಗುರುವಾರ ಪ್ರಕಟಿಸಿದರು.
ಜನವರಿ 22ರಿಂದ ಆರಂಭವಾಗಿದ್ದ ವಿಶೇಷ ಜಂಟಿ ಅಧಿವೇಶನವು ಮೂಲತಃ ಜನವರಿ 31ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಇತ್ತೀಚಿನ ಸಭೆಯಲ್ಲಿ ಮಹತ್ವದ ಮನರೇಗಾ ಕಾಯ್ದೆ ಕುರಿತು ಸಮಗ್ರ ಚರ್ಚೆ ನಡೆಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿವೇಶನ ವಿಸ್ತರಣೆ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ಯು.ಟಿ ಖಾದರ್, “ಜನವರಿ 22ರಿಂದ ಆರಂಭವಾದ ಒಂಬತ್ತನೇ ಅಧಿವೇಶನವನ್ನು ಜನವರಿ 31ರ ಬದಲಿಗೆ ಫೆಬ್ರವರಿ 4ರವರೆಗೆ ಮುಂದುವರಿಸಲು ಇಂದು ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಜನವರಿ 30ರಂದು ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು. ಜನವರಿ 31ರಂದು ಅಧಿವೇಶನ ಇರುವುದಿಲ್ಲ. ಫೆಬ್ರವರಿ 2ರಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಲಿದ್ದಾರೆ ಎಂದು ಖಾದರ್ ಅವರು ಸದನಕ್ಕೆ ಮಾಹಿತಿ ನೀಡಿದರು.





