
ಚೆನ್ನೈ, ಮಾ.15: ತಮಿಳಿನ ಖ್ಯಾತ ಗೀತರಚನೆಕಾರ ಹಾಗೂ ಬರಹಗಾರ ವೈರಮುತ್ತು ಅವರಿಗೆ ಈ ವರ್ಷದ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದರಿಂದ ತಮಿಳುನಾಡು ಸೇರಿದಂತೆ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತೀವ್ರ ವಿವಾದ ಉದ್ಭವಿಸಿದೆ. ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗೆ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
2018ರಲ್ಲಿ ‘ಮೀ ಟೂ’ ಚಳವಳಿಯ ಸಂದರ್ಭದಲ್ಲಿ ತಮಿಳಿನ ಪ್ರಸಿದ್ಧ ಗಾಯಕಿ ಚಿನ್ಮಯಿ ಶ್ರೀಪಾದ್ ಸೇರಿದಂತೆ ಹಲವಾರು ಮಹಿಳೆಯರು ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಬಹಿರಂಗವಾಗಿ ಮಾಡಿದ್ದರು. ತಮ್ಮ ಮೇಲಾದ ಅನುಭವಗಳನ್ನು ವಿವರಿಸಿದ ಚಿನ್ಮಯಿ, 2005ರ ಅವಧಿಯಲ್ಲಿ ವೈರಮುತ್ತುವಿನಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೆ ನೀಡಿದ್ದರು. ಬಳಿಕ ಇನ್ನೂ ಹಲವು ಮಹಿಳೆಯರು ಸಹ ಇಂತಹ ಆರೋಪಗಳನ್ನು ಮುಂದಿಟ್ಟಿದ್ದರು.
ಈ ಆರೋಪಗಳ ಕುರಿತು ಮಾತನಾಡಿದ್ದಕ್ಕಾಗಿ ತಮಗೆ ವೃತ್ತಿಜೀವನದಲ್ಲಿಯೂ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಚಿನ್ಮಯಿ ಹೇಳಿಕೊಂಡಿದ್ದು, ಈ ಕುರಿತು ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಲಭ್ಯವಿವೆ. ಆರೋಪ ಮಾಡಿದವರಲ್ಲಿ ಕೆಲವು ಪತ್ರಕರ್ತೆಯರು ಮತ್ತು ಗಾಯಕಿಯರೂ ಇದ್ದರು ಎಂದು ತಿಳಿದುಬಂದಿದೆ.
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಸಹೋದರಿ ರಿಹಾನಾ ಸಹ ವೈರಮುತ್ತು ವಿರುದ್ಧ ಹಿಂದಿನಿಂದಲೂ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪಗಳಿರುವುದಾಗಿ ಹೇಳಿಕೆ ನೀಡಿದ್ದರು. ಇಷ್ಟಾದರೂ ಅವರ ವಿರುದ್ಧ ಸಮಗ್ರ ತನಿಖೆ ನಡೆದಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ವೈರಮುತ್ತು ಅವರಿಗೆ ತಮಿಳುನಾಡಿನ ರಾಜಕೀಯ ವಲಯದ ಬೆಂಬಲವಿದೆ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಇದೇ ಕಾರಣದಿಂದಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಾಗಿರಲಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೀಗ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದ ಬಳಿಕ ಹಲವು ಲೇಖಕರು ಮತ್ತು ಕಲಾವಿದರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಲೇಖಕಿ ಸುಚಿತ್ರಾ, “ಇದು ಲಾಬಿ ಮೂಲಕ ದೊರೆತ ಪ್ರಶಸ್ತಿ. ತಮಿಳಿನಲ್ಲಿ ಇವರಿಗಿಂತ ಶ್ರೇಷ್ಠ ಸಾಹಿತಿಗಳು ಇದ್ದಾರೆ. ವೈರಮುತ್ತು ಒಬ್ಬ ‘ಬಾಂಬಾಸ್ಟಿಕ್ ಪೋಯಟಾಸ್ಟರ್’,” ಎಂದು ಟೀಕಿಸಿದ್ದಾರೆ. ಹಿರಿಯ ಲೇಖಕಿ ಮೀನಾ ಕಂದಸ್ವಾಮಿ ಸಹ ಈ ಆಯ್ಕೆಯನ್ನು ಕಟುವಾಗಿ ವಿರೋಧಿಸಿದ್ದಾರೆ.
ವೈರಮುತ್ತು ಅವರಿಗೆ ಈಗಾಗಲೇ ಪದ್ಮಶ್ರೀ ಮತ್ತು ಪದ್ಮಭೂಷಣ ಸೇರಿದಂತೆ ಹಲವು ಗೌರವಗಳು ದೊರೆತಿವೆ. ಆದರೆ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳ ನಡುವೆಯೇ ಜ್ಞಾನಪೀಠ ಪ್ರಶಸ್ತಿ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಗಮನಾರ್ಹವಾಗಿದೆ.
ಈ ಕುರಿತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ನಿಲುವು ಏನು ಎಂಬುದನ್ನು ತಿಳಿಯಬೇಕಿದೆ ಎಂದು ಸಾಹಿತ್ಯ ವಲಯದವರು ಪ್ರಶ್ನಿಸುತ್ತಿದ್ದಾರೆ. ಆರೋಪಗಳು ಸಾಬೀತಾಗಿಲ್ಲವೆಂಬ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಯೂ ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.





