
ನವದೆಹಲಿ, ಜ.16: ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆ ಭಾರತ ಸರ್ಕಾರ ಇರಾನ್‌ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ತುರ್ತು ಕ್ರಮಗಳನ್ನು ಕೈಗೊಂಡಿದೆ.
ಭದ್ರತಾ ದೃಷ್ಟಿಯಿಂದ ಇರಾನ್‌ನಲ್ಲಿರುವ ಭಾರತೀಯರು ಕೂಡಲೇ ದೇಶ ತೊರೆಯುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸೂಚನೆ ನೀಡಿದ್ದು, ವಾಪಸ್ಸು ಬಯಸುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರವೇ ಕಾರ್ಯಾಚರಣೆಗೆ ಮುಂದಾಗಿದೆ.
ಈ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, “ಇರಾನ್‌ನ ಹಲವು ಭಾಗಗಳಲ್ಲಿ ಅಶಾಂತಿ ಮುಂದುವರೆದಿದೆ. ಅಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತಕ್ಕೆ ಮರಳಲು ಬಯಸುವ ಭಾರತೀಯ ಪ್ರಜೆಗಳ ವಾಪಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದೆ.
ಮೂಲಗಳ ಪ್ರಕಾರ, ಈ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ವಿಶೇಷ ವಿಮಾನ ಸೇವೆಗಳನ್ನು ಒದಗಿಸುತ್ತಿದ್ದು, ಮೊದಲ ವಿಮಾನ ಇಂದೇ ಇರಾನ್‌ನತ್ತ ಪಯಣ ಆರಂಭಿಸಿದೆ. ಗೋಲೆಸ್ತಾನ್ ವಿಶ್ವವಿದ್ಯಾಲಯ, ಶಾಹಿದ್ ಬೆಹೆಶ್ಟಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಟೆಹ್ರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಅಲ್ಪ ಸಂಖ್ಯೆಯ ವಿದ್ಯಾರ್ಥಿಗಳು ಮೊದಲ ಸ್ಥಳಾಂತರಿಸುವ ಬ್ಯಾಚ್‌ನ ಭಾಗವಾಗುವ ನಿರೀಕ್ಷೆಯಿದೆ.
ಭದ್ರತಾ ಅನುಮತಿಗಳು ಹಾಗೂ ವಿಮಾನ ಮಾರ್ಗಗಳ ಲಭ್ಯತೆಗೆ ಒಳಪಟ್ಟು, ಸ್ಥಳಾಂತರಿಸಲ್ಪಟ್ಟವರ ಮೊದಲ ಗುಂಪನ್ನು ಶುಕ್ರವಾರದ ವೇಳೆಗೆ ಇರಾನ್‌ನಿಂದ ಹೊರಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್‌ನ ವಿವಿಧ ಪ್ರದೇಶಗಳಲ್ಲಿ ಚದುರಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ಪ್ರಜೆಗಳನ್ನು ಸಂಪರ್ಕಿಸಲು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಯಾರು ಭಾರತಕ್ಕೆ ಮರಳಲು ಬಯಸುತ್ತಾರೆ ಎಂಬುದನ್ನು ಗುರುತಿಸಿ, ಅವರಿಗೆ ವಾಪಸ್ಸಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಆದರೆ, ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿರುವುದು ಹಾಗೂ ದೂರಸಂಪರ್ಕ ಜಾಲಗಳು ವಿಶ್ವಾಸಾರ್ಹವಾಗಿಲ್ಲದ ಕಾರಣ, ಈ ಪ್ರಕ್ರಿಯೆಯನ್ನು ಹೆಚ್ಚಿನ ಮಟ್ಟಿಗೆ ಭೌತಿಕ ಸಂಪರ್ಕದ ಮೂಲಕ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳು ಸ್ಥಳದಲ್ಲೇ ತೆರಳಿ ವಿದ್ಯಾರ್ಥಿಗಳನ್ನು ಗುರುತಿಸಿ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಗುರುವಾರ ಇರಾನ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಸ್ಥಳಾಂತರಿಸುವ ಯೋಜನೆಯೂ ಕೆಲವೊಂದು ಅಡಚಣೆಗಳನ್ನು ಎದುರಿಸುತ್ತಿದೆ. ಏರ್ ಇಂಡಿಯಾ ಕನಿಷ್ಠ ಮೂರು ಅಮೆರಿಕಕ್ಕೆ ತೆರಳುವ ವಿಮಾನಗಳನ್ನು ರದ್ದುಗೊಳಿಸಿದ್ದು, ಯುರೋಪ್‌ಗೆ ತೆರಳುವ ಕೆಲ ವಿಮಾನಗಳಲ್ಲಿ ವಿಳಂಬ ಸಂಭವಿಸಬಹುದೆಂದು ತಿಳಿಸಿದೆ.
ಈ ನಡುವೆ, ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
“ನಮ್ಮ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭರವಸೆ ನನಗೆ ದೊರೆತಿದೆ” ಎಂದು ಅವರು ಹೇಳಿದ್ದಾರೆ.





