75 ದೇಶಗಳ ವಲಸೆ ವೀಸಾಗಳಿಗೆ ತಾತ್ಕಾಲಿಕ ತಡೆ; ಅಮೆರಿಕಾದಿಂದ ಮಾಸ್ಟರ್ ಸ್ಟ್ರೋಕ್!

0
18
Advertisement

ವಾಷಿಂಗ್ಟನ್‌ ಡಿಸಿ, ಜ.15: ಅಮೆರಿಕದ ವಲಸೆ ನೀತಿಯನ್ನು ಇನ್ನಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ಟ್ರಂಪ್‌ ಆಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಅಮೆರಿಕಕ್ಕೆ ಕಾನೂನುಬದ್ಧವಾಗಿ ವಲಸೆ ಬಯಸುವವರಿಗೆ ಹೊಡೆತ ನೀಡುವಂತೆ, 75 ದೇಶಗಳಿಂದ ಸಲ್ಲಿಕೆಯಾಗುವ ವಲಸೆ ವೀಸಾಗಳ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಈ ಹೊಸ ನಿರ್ಬಂಧಗಳು ಜನವರಿ 21ರಿಂದ ಜಾರಿಗೆ ಬರಲಿದ್ದು, ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಹಾಗೂ ಪೂರ್ವ ಯುರೋಪ್‌ನ ಹಲವು ರಾಷ್ಟ್ರಗಳು ಇದರ ವ್ಯಾಪ್ತಿಗೆ ಬರುತ್ತವೆ.

ಅಮೆರಿಕದ ಕಸ್ಟಮ್ಸ್‌ ಮತ್ತು ವಲಸೆ ಇಲಾಖೆ (ಐಸಿಇ) ಮಾಹಿತಿ ನೀಡಿರುವಂತೆ, ಪಾಕಿಸ್ತಾನ, ಬಾಂಗ್ಲಾದೇಶ, ಸೊಮಾಲಿಯಾ, ರಷ್ಯಾ, ಇರಾನ್, ಅಫ್ಘಾನಿಸ್ತಾನ, ಬ್ರೆಜಿಲ್, ನೈಜೀರಿಯಾ, ಥೈಲ್ಯಾಂಡ್ ಸೇರಿದಂತೆ ಒಟ್ಟು 75 ದೇಶಗಳ ವಲಸೆ ವೀಸಾಗಳ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಕ್ರಮವು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಹಾಗೂ ಉದ್ಯೋಗ ಮಾಡಲು ಬಯಸುವವರಿಗೆ ಮಾತ್ರ ಅನ್ವಯವಾಗಿದ್ದು, ಪ್ರವಾಸಿ ವೀಸಾ ಅಥವಾ ತಾತ್ಕಾಲಿಕ ಕೆಲಸಗಾರರ ವೀಸಾಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದಲೇ ಟ್ರಂಪ್‌ ಆಡಳಿತ ವಿದೇಶಿಗರು ಹಾಗೂ ಸಂಭಾವ್ಯ ನಿವಾಸಿಗಳ ಮೇಲಿನ ವೀಸಾ ಪರಿಶೀಲನೆಯನ್ನು ಕಠಿಣಗೊಳಿಸುತ್ತಿದ್ದು, ಜಗತ್ತಿನಲ್ಲೇ ಅತ್ಯಂತ ಕಟ್ಟುನಿಟ್ಟಿನೆಂದು ಪರಿಗಣಿಸಲಾದ ವೀಸಾ ಸ್ಕ್ರೀನಿಂಗ್ ವ್ಯವಸ್ಥೆಗೆ ಇನ್ನಷ್ಟು ನಿರ್ಬಂಧಗಳನ್ನು ಸೇರಿಸಿದೆ. ಸರ್ಕಾರದ ಕಲ್ಯಾಣ ಯೋಜನೆಗಳ ಮೇಲೆ ಅವಲಂಬಿತವಾಗುವ ಸಾಧ್ಯತೆ ಇರುವ ಅರ್ಜಿದಾರರ ವೀಸಾಗಳನ್ನು ತಿರಸ್ಕರಿಸುವ ನೀತಿಗೂ ಚಾಲನೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಟಾಮಿ ಪಿಗೋಟ್‌, “ಅಮೆರಿಕದ ಜನರಿಂದ ಸಂಪತ್ತನ್ನು ಕಸಿದುಕೊಳ್ಳುವವರು ಹಾಗೂ ವಲಸೆ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಇಲ್ಲಿ ಅವಕಾಶವಿಲ್ಲ. ಈ ದುರುಪಯೋಗಕ್ಕೆ ಟ್ರಂಪ್‌ ಆಡಳಿತ ಅಂತ್ಯ ಹಾಡುತ್ತಿದೆ” ಎಂದು ಹೇಳಿದ್ದಾರೆ. 75 ದೇಶಗಳ ವಲಸೆ ವೀಸಾ ಪ್ರಕ್ರಿಯೆಗೆ ವಿರಾಮ ನೀಡಲಾಗುತ್ತಿದ್ದು, ಕಲ್ಯಾಣ ಹಾಗೂ ಸಾರ್ವಜನಿಕ ಪ್ರಯೋಜನಗಳನ್ನು ಪಡೆಯುವ ವಿದೇಶಿ ಪ್ರಜೆಗಳ ಪ್ರವೇಶ ತಡೆಯಲು ವಲಸೆ ಕ್ರಮಗಳನ್ನು ಮರುಮೌಲ್ಯಮಾಪನ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.

ಈ ಹೊಸ ನಿರ್ಬಂಧಗಳು ಈ ವರ್ಷದ ಫಿಫಾ ಫುಟ್ಬಾಲ್‌ ವಿಶ್ವಕಪ್‌ ವೀಕ್ಷಣೆಗೆ ಅಮೆರಿಕಕ್ಕೆ ಬರುವ ಅಭಿಮಾನಿಗಳ ವೀಸಾಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಎಲ್ಲಾ ವೀಸಾ ಅರ್ಜಿದಾರರ ಸಾಮಾಜಿಕ ಮಾಧ್ಯಮ ಪರಿಶೀಲನೆಯನ್ನು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ ಎಂದು ಆಡಳಿತ ಸ್ಪಷ್ಟಪಡಿಸಿದೆ.

ಇದುವರೆಗೂ ಟ್ರಂಪ್‌ ಆಡಳಿತವು ಕಳೆದ ಒಂದು ವರ್ಷದಲ್ಲೇ ಸುಮಾರು 1 ಲಕ್ಷ ವೀಸಾಗಳನ್ನು ರದ್ದುಪಡಿಸಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ, 6.05 ಲಕ್ಷಕ್ಕೂ ಹೆಚ್ಚು ಜನರನ್ನು ಗಡಿಪಾರು ಮಾಡಲಾಗಿದ್ದು, 25 ಲಕ್ಷಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತವಾಗಿ ಅಮೆರಿಕ ತೊರೆದಿದ್ದಾರೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಇತ್ತೀಚೆಗೆ ತಿಳಿಸಿದೆ. ಈ ಅಂಕಿ-ಅಂಶಗಳು ಟ್ರಂಪ್‌ ಆಡಳಿತದ ಕಠಿಣ ವಲಸೆ ವಿರೋಧಿ ನೀತಿಗೆ ಸ್ಪಷ್ಟ ಸಾಕ್ಷಿಯಾಗಿದೆ.

Advertisement

LEAVE A REPLY

Please enter your comment!
Please enter your name here