ಇಂಧನ ಕೊರತೆ ಸಂಕಷ್ಟ: ಶ್ರೀಲಂಕಾದಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ನಿಗದಿ

0
5
Advertisement

ಕೊಲಂಬೋ, ಮಾ.17: ಪಶ್ಚಿಮ ಏಷ್ಯಾದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ನೆರೆಯ ಶ್ರೀಲಂಕಾದಲ್ಲಿ ಇಂಧನ ಕೊರತೆಯ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ವಾರಕ್ಕೆ ನಾಲ್ಕು ದಿನಗಳ ಕೆಲಸದ ವಾರವನ್ನು ಘೋಷಿಸಿದೆ.

ಇಂಧನ ಕೊರತೆಯ ಹಿನ್ನೆಲೆ ತುರ್ತು ಕ್ರಮವಾಗಿ ಶ್ರೀಲಂಕಾ ಸರ್ಕಾರ ಸೋಮವಾರ ಈ ನಿರ್ಧಾರ ಪ್ರಕಟಿಸಿದ್ದು, ಪ್ರತಿ ಬುಧವಾರವನ್ನು ಸಾರ್ವಜನಿಕ ರಜೆಯಾಗಿ ಘೋಷಿಸಲಾಗಿದೆ. ಪ್ರಸ್ತುತ ದೇಶದಲ್ಲಿ ಐದು ದಿನಗಳ ಕೆಲಸದ ವಾರ ಅನುಸರಿಸಲಾಗುತ್ತಿದ್ದು, ಹೊಸ ವ್ಯವಸ್ಥೆ ಮಾರ್ಚ್ 18ರಿಂದ ಜಾರಿಗೆ ಬರಲಿದೆ.

ಈ ಕುರಿತು ಅಗತ್ಯ ಸೇವೆಗಳ ಆಯುಕ್ತ ಜನರಲ್ ಪ್ರಭತ್ ಚಂದ್ರಕೀರ್ತಿ ಮಾತನಾಡಿ, “ಮಾರ್ಚ್ 18ರಿಂದ ಪ್ರತಿ ಬುಧವಾರವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

ಆದರೆ ಆರೋಗ್ಯ ಸೇವೆಗಳು, ಬಂದರುಗಳು, ನೀರು ಸರಬರಾಜು ಮತ್ತು ಕಸ್ಟಮ್ಸ್ ಇಲಾಖೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಶಾಲೆಗಳು, ವಿಶ್ವವಿದ್ಯಾಲಯಗಳು ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಈ ಕ್ರಮ ಅನ್ವಯವಾಗಲಿದ್ದು, ಖಾಸಗಿ ವಲಯವೂ ಇದೇ ಕ್ರಮವನ್ನು ಅನುಸರಿಸುವುದಾಗಿ ಸರ್ಕಾರ ನಿರೀಕ್ಷಿಸಿದೆ.

ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ಇಂಧನ ಅಡಚಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಕರೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ನಡುವೆ, ಕಳೆದ ವಾರ ಶ್ರೀಲಂಕಾ ಸರ್ಕಾರ ಇಂಧನದ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಿದ್ದು, ಸಂಗ್ರಹಣೆಯನ್ನು ತಡೆಗಟ್ಟಲು ಭಾನುವಾರದಿಂದ ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಹೊಸ ವ್ಯವಸ್ಥೆಯ ಘೋಷಣೆಯ ಬಳಿಕ ದೇಶದ ಹಲವು ಇಂಧನ ಕೇಂದ್ರಗಳ ಬಳಿ ದೀರ್ಘ ಸಾಲುಗಳು ಕಂಡುಬಂದಿವೆ.
ಇಂಧನದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಹಾಗೂ ರಷ್ಯಾ ದೇಶಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.

Advertisement

LEAVE A REPLY

Please enter your comment!
Please enter your name here