
ದುಬೈ, ಮಾ.16: ವಾಯುನೆಲೆಯ ಸಮೀಪ ನಡೆದ ಡ್ರೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ದಾಳಿಯಿಂದ ಇಂಧನ ಟ್ಯಾಂಕ್‌ಗಳಿಗೆ ಹಾನಿಯಾಗಿದ್ದು, ತುರ್ತು ಸೇವಾ ತಂಡಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟುಗೊಳಿಸಲಾಗಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ.
ಈ ಹಿನ್ನೆಲೆಯಲ್ಲಿ ಹಲವು ವಿಮಾನಗಳನ್ನು ವಿಮಾನ ನಿಲ್ದಾಣದ ಹೊರವಲಯದಲ್ಲಿ ಸುತ್ತುವಂತೆ ಮಾಡಲಾಗಿದ್ದು, ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಿದೆ. ದುಬೈನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ ಪ್ರಮುಖ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನ ಕೆಲವು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ದೃಢಪಡಿಸಿದೆ.
ಇದೇ ವೇಳೆ, ಘಟನೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಂಧಿಸಲಾದ ೩೫ ಮಂದಿಯಲ್ಲಿ ೧೯ ಭಾರತೀಯರು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ದಿನಗಳ ಹಿಂದೆ ಸಂಭವಿಸಿದ್ದ ಮತ್ತೊಂದು ದಾಳಿಯಿಂದ ಉಂಟಾದ ಸಣ್ಣ ಮಟ್ಟದ ಅಡಚಣೆಯ ಬಳಿಕ ಮತ್ತೆ ಈ ರೀತಿಯ ಘಟನೆ ಸಂಭವಿಸಿರುವುದು ಭದ್ರತಾ ಕಳವಳಗಳನ್ನು ಹೆಚ್ಚಿಸಿದೆ.





