ಮತಾಂತರವಾದರೆ ದಲಿತ ಸ್ಥಾನಮಾನ ಇಲ್ಲ: ಸುಪ್ರೀಂಕೋರ್ಟ್ ಮಹತ್ವದ ಆದೇಶ!

0
7
Advertisement

ನವದೆಹಲಿ, ಮಾ.24: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಸೇರಿದವರಿಗಷ್ಟೇ ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ ಅನ್ವಯಿಸುತ್ತದೆ. ಕ್ರೈಸ್ತ ಧರ್ಮ ಸೇರಿದಂತೆ ಇತರ ಧರ್ಮಗಳಿಗೆ ಮತಾಂತರವಾದರೆ ದಲಿತ ಸ್ಥಾನಮಾನ ಹಾಗೂ ಪರಿಶಿಷ್ಟ ಜಾತಿ ಸ್ಥಾನಮಾನ ಉಳಿಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನ್ಮೋಹನ್ ಅವರ ಪೀಠವು, “ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವಲ್ಲದ ಧರ್ಮವನ್ನು ಅನುಸರಿಸುವವರು ಪರಿಶಿಷ್ಟ ಜಾತಿಗೆ ಸೇರಲು ಅರ್ಹರಾಗುವುದಿಲ್ಲ. ಇತರ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಹೋಗುತ್ತದೆ” ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನಂತೆ, ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತ ವ್ಯಕ್ತಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಎಸ್‌ಸಿ/ಎಸ್‌ಟಿ ಕಾಯ್ದೆ) ಉಲ್ಲಂಘನೆಯಾಗಿದೆ ಎಂದು ಹೇಳಿ ದೂರು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಈ ಪ್ರಕರಣವು ಚಿಂತಡಾ ಆನಂದ್ ಎಂಬ ಪಾಸ್ಟರ್ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದೆ. ಅವರು ಅಕ್ಕಲ ರಾಮಿರೆಡ್ಡಿ ಹಾಗೂ ಇತರರಿಂದ ಜಾತಿ ಆಧಾರಿತ ಅವಮಾನ ಮತ್ತು ದೌರ್ಜನ್ಯ ಅನುಭವಿಸಿದ್ದಾಗಿ ಆರೋಪಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಆದರೆ, ಈ ಪ್ರಕರಣವನ್ನು ರದ್ದುಪಡಿಸುವಂತೆ ರಾಮಿರೆಡ್ಡಿ ಅವರು ಆಂಧ್ರಪ್ರದೇಶ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಎನ್. ಹರಿನಾಥ್ ಅವರು, ಆನಂದ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಅವರ ಪರಿಶಿಷ್ಟ ಜಾತಿ ಸ್ಥಾನಮಾನ ಅಮಾನ್ಯವಾಗಿದೆ. ಹೀಗಾಗಿ ಅವರಿಗೆ ಕಾಯ್ದೆಯಡಿ ರಕ್ಷಣೆಯ ಹಕ್ಕಿಲ್ಲ ಎಂದು ಹೇಳಿ ಎಫ್‌ಐಆರ್ ಅನ್ನು ರದ್ದುಪಡಿಸಿದ್ದರು.

ಆನಂದ್ ಅವರ ಬಳಿ ಎಸ್‌ಸಿ ಪ್ರಮಾಣಪತ್ರ ಇದ್ದರೂ ಅದು ಪ್ರಕರಣಕ್ಕೆ ಸಹಾಯವಾಗುವುದಿಲ್ಲ. ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲದ ಕಾರಣ, ಮತಾಂತರದೊಂದಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಹೋಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಆನಂದ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿ ಅಂತಿಮವಾಗಿ ಮಹತ್ವದ ಆದೇಶ ನೀಡಿದೆ.

Advertisement

LEAVE A REPLY

Please enter your comment!
Please enter your name here