ಬೆಂಗಳೂರು ಉಪನಗರ ರೈಲು ಯೋಜನೆ ಶೀಘ್ರ ಪೂರ್ಣಗೊಳಿಸಲು ನಗರ ಕಾರ್ಯಕರ್ತರಿಂದ ಒತ್ತಾಯ

0
7
Advertisement

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣ ಮಾರ್ಗಕ್ಕಾಗಿ ಮಾಡಿರುವ ಉಪನಗರ ರೈಲು ಯೋಜನೆಗೆ ನಿಗದಿಪಡಿಸಿರುವ 2030ರ ಮಾರ್ಚ್ ಗಡುವನ್ನು 2028ಕ್ಕೆ ಇಳಿಸಬೇಕು ಹಾಗೂ ಕಾಮಗಾರಿಗೆ ಆದ್ಯತೆ ನೀಡಿ ಶೀಘ್ರ ಪೂರ್ಣಗೊಳಿಸುವಂತೆ ಪರಿಸರವಾದಿಗಳು, ನಾಗರಿಕ ಹಕ್ಕು ಕಾರ್ಯಕರ್ತರು, ಸಂಚಾರ ತಜ್ಞರು ಸೇರಿದಂತೆ ಸುಮಾರು 40 ಮಂದಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆ–ರೈಡ್)ಗೆ ಮನವಿ ಮಾಡಿದ್ದಾರೆ.

ಮಾರ್ಚ್ 12ರಂದು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ, ವಿಮಾನ ನಿಲ್ದಾಣ ಸಂಪರ್ಕ ಹೊಂದಿರುವ ಕಾರಿಡಾರ್–1 ಕಾಮಗಾರಿಯನ್ನು ವೇಗಗೊಳಿಸಿ ಗಡುವನ್ನು 2028ರ ಮಾರ್ಚ್‌ಗೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತ ವಾಸಿಸುವ ಲಕ್ಷಾಂತರ ಜನರ ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಈ ಯೋಜನೆಯನ್ನು ತ್ವರಿತಗೊಳಿಸುವ ಅಗತ್ಯವಿದೆ ಎಂದು ನಗರ ಕಾರ್ಯಕರ್ತರು ತಿಳಿಸಿದ್ದಾರೆ.

“ಅತ್ಯಂತ ಅಗತ್ಯವಾದ ಸಾರ್ವಜನಿಕ ಸಾರಿಗೆ ಯೋಜನೆಗೆ ವಿಳಂಬಕ್ಕೆ ಕಾರಣಗಳನ್ನು ನೀಡುವುದಕ್ಕಿಂತ ತಜ್ಞರಿಂದ ಸೂಕ್ತ ಕ್ರಮಗಳನ್ನು ನಿರೀಕ್ಷಿಸುತ್ತೇವೆ. ಎಲ್ಲಾ ಯೋಜನೆ ಮತ್ತು ಮಾರ್ಗ ಅನುಮತಿಗಳು ಈಗಾಗಲೇ ದೊರೆತಿರುವ ಹಿನ್ನೆಲೆಯಲ್ಲಿ 2028ರ ಗಡುವು ಸಾಧನೀಯ ಎಂದು ನಾವು ನಂಬುತ್ತೇವೆ,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಉಪನಗರ ರೈಲು ಯೋಜನೆಗಾಗಿ ನಾಗರಿಕರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಯೋಜನೆ ಇನ್ನೂ ಪೂರ್ಣಗೊಳ್ಳದಿರುವುದು ದುಃಖಕರ ಎಂದು ಸಿಟಿಜನ್ಸ್‌ ಫಾರ್‌ಸಿಟಿಜನ್ಸ್‌ (ಸಿ4ಸಿ) ಸಂಸ್ಥೆಯ ಸ್ಥಾಪಕ ರಾಜ್‌ಕುಮಾರ್ ದುಗಾರ್ ಹೇಳಿದರು. ಪ್ರತಿದಿನ ಸಂಚಾರ ದಟ್ಟಣೆಯಿಂದ ಸಂಕಷ್ಟ ಅನುಭವಿಸುವ ಪ್ರಯಾಣಿಕರಿಗೆ ವಿಳಂಬವು ಮತ್ತಷ್ಟು ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಉಪನಗರ ರೈಲು ಯೋಜನೆ ಮತ್ತು ಹಳಿ ದ್ವಿಗುಣೀಕರಣ ಕಾಮಗಾರಿಗಳಲ್ಲಿ ಭಾರೀ ವಿಳಂಬವಾಗಿದ್ದು, ನಾಲ್ಕು ಮಾರ್ಗಗಳಲ್ಲಿಯೂ ಯಾವುದೂ ಪೂರ್ಣತೆಗೆ ಸಮೀಪಿಸಿಲ್ಲ ಎಂದು ತಜ್ಞರು ಗಮನಕ್ಕೆ ತಂದಿದ್ದಾರೆ. ಕಾಮಗಾರಿಗಳ ನಿಧಾನಗತಿಯಿಂದ ಯೋಜನೆಯ ವೆಚ್ಚ ಹೆಚ್ಚುತ್ತಿದ್ದು, ಪ್ರಯಾಣಿಕರಿಗೆ ಆಗುತ್ತಿರುವ ಅಸೌಕರ್ಯವೂ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ಹಳಿ ದ್ವಿಗುಣೀಕರಣ ಕಾಮಗಾರಿಗಳ ಪ್ರಗತಿ 50 ಶೇಕಡಕ್ಕೂ ಕಡಿಮೆ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ 15 ಶೇಕಡಕ್ಕೂ ಕಡಿಮೆ ಮಾತ್ರವಾಗಿದೆ. ಸಿಲಿಕಾನ್ ಸಿಟಿ, ಐಟಿ ಸಿಟಿ, ಟೆಕ್ ಸಿಟಿ ಎಂದು ಹೆಸರಾಗಿರುವ ಜಾಗತಿಕ ನಗರಕ್ಕೆ ಇದು ತಕ್ಕದ್ದಲ್ಲ. ಕೆ–ರೈಡ್‌ನ ನಿಧಾನಗತಿಯ ಕಾಮಗಾರಿಯಿಂದ ಸಾರ್ವಜನಿಕರ ನಂಬಿಕೆ ಕುಗ್ಗುತ್ತಿದೆ,” ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಯನ್ನು ವೇಗಗೊಳಿಸುವುದರ ಜೊತೆಗೆ ಎರಡನೇ ಮತ್ತು ನಾಲ್ಕನೇ ಮಾರ್ಗಗಳ ಕಾಮಗಾರಿಯನ್ನು ಪುನರಾರಂಭಿಸಬೇಕು. ಕೆಂಗೇರಿ–ಕಂಟೋನ್‌ಮೆಂಟ್ ನಡುವಿನ ಮೂರನೇ ಮಾರ್ಗವನ್ನು ಅಂತಿಮಗೊಳಿಸಬೇಕು, ಹಾಗೂ ಅಕ್ಕುಪೇಟೆ ಮತ್ತು ಸೊಲದೇವನಹಳ್ಳಿ ಡಿಪೋಗಳ ಕಾಮಗಾರಿಯನ್ನು ಆರಂಭಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು ಭಾರತದ ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿದ್ದು, ನಗರಕ್ಕೆ ವಿಶ್ವಮಟ್ಟದ ಸಂಚಾರ ವ್ಯವಸ್ಥೆ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ನಗರದ ಆರ್ಥಿಕ ಮಹತ್ವಕ್ಕೆ ತಕ್ಕಂತೆ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ತ್ವರಿತಗೊಳಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇದೀಗ ಬೆಂಗಳೂರಿನ ವಾಯು ಗುಣಮಟ್ಟವೂ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾದ ಉಪನಗರ ರೈಲು ಯೋಜನೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಪರಿಸರ ಕಾರ್ಯಕರ್ತರು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here