
ನವದೆಹಲಿ, ಫೆ.06: ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಪಡೆದಿರುವ ಬಾಲಿವುಡ್ ಚಿತ್ರನಟ ರಾಜ್ ಪಾಲ್ ಯಾದವ್ ಗುರುವಾರ ತಿಹಾರ್ ಜೈಲಿಗೆ ಶರಣಾಗಿದ್ದಾರೆ. 2024ರ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ರಾಜ್ ಪಾಲ್ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಶರಣಾಗಲು ನಿಗದಿಪಡಿಸಿದ್ದ ಗಡುವನ್ನು ವಿಸ್ತರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಗಡುವು ವಿಸ್ತರಣೆ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ, ನಟನ ಹಿನ್ನೆಲೆ ಅಥವಾ ಚಿತ್ರೋದ್ಯಮದ ಕಾರಣಕ್ಕೆ ʼವಿಶೇಷ ಸಂದರ್ಭಗಳನ್ನು ಸೃಷ್ಟಿಸಲು ಸಾಧ್ಯವಿಲ್ಲʼ ಎಂದು ಸ್ಪಷ್ಟಪಡಿಸಿತು. ಜೈಲು ಅಧಿಕಾರಿಗಳ ಪ್ರಕಾರ, ಹೈಕೋರ್ಟ್ ಆದೇಶದಂತೆ ಗುರುವಾರ ಸಂಜೆ ಸುಮಾರು 4 ಗಂಟೆಗೆ ಯಾದವ್ ಅವರು ತಿಹಾರ್ ಜೈಲು ಅಧಿಕಾರಿಗಳ ಮುಂದೆ ಹಾಜರಾಗಿ ಶರಣಾದರು.
ಈ ಆದೇಶವನ್ನು ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಅವರು ನೀಡಿದ್ದು, ಫೆಬ್ರವರಿ 2ರ ಆದೇಶದಂತೆ ಫೆಬ್ರವರಿ 4ರಂದು ಶರಣಾಗಬೇಕಿದ್ದ ನಿರ್ದೇಶನವನ್ನು ಪಾಲಿಸದಿರುವುದಕ್ಕೆ ನಟನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಿಹಾರ್ ಜೈಲು ಅಧೀಕ್ಷಕರ ಮುಂದೆ ಶರಣಾಗುವ ಹಿಂದಿನ ನಿರ್ದೇಶನವನ್ನು ಹಿಂತೆಗೆದುಕೊಳ್ಳಲು ನ್ಯಾಯಾಲಯ ನಿರಾಕರಿಸಿತು.
ವಿಚಾರಣೆ ವೇಳೆ, ಯಾದವ್ ಪರ ವಕೀಲರು, ಪೀಡಿತರಿಗೆ ಹಣವನ್ನು ಮರುಪಾವತಿಸಲು ಹಣಕಾಸು ವ್ಯವಸ್ಥೆ ಮಾಡುವ ಪ್ರಯತ್ನದಲ್ಲಿದ್ದ ಕಾರಣ ಮತ್ತು ಸಂಜೆ 4 ಗಂಟೆಯೊಳಗೆ ದೆಹಲಿಗೆ ತಲುಪಲು ಸಾಧ್ಯವಾಗದ ಕಾರಣ, ಫೆಬ್ರವರಿ 4ರಂದು ಶರಣಾಗಲು ಸಾಧ್ಯವಾಗಲಿಲ್ಲ ಎಂದು ವಾದಿಸಿದರು. ಶರಣುವಾಗುವ ಆದೇಶವನ್ನು ಹಿಂಪಡೆಯಲು ಹಾಗೂ ಪಾವತಿಗೆ ಹೆಚ್ಚಿನ ಸಮಯ ನೀಡುವಂತೆ ಅವರು ಮನವಿ ಸಲ್ಲಿಸಿದರು. ಆದರೆ, ನ್ಯಾಯಾಲಯ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿತು.
ಫೆಬ್ರವರಿ 2ರ ಆದೇಶವು ವಕೀಲರ ಸಮ್ಮುಖದಲ್ಲೇ ನೀಡಲಾಗಿದ್ದು, ಅದೇ ದಿನ ಸಂಜೆ ಅಪ್‌ಲೋಡ್ ಆಗಿದ್ದರಿಂದ ಗಡುವು ಕುರಿತು ʼಯಾವುದೇ ಗೊಂದಲಕ್ಕೆ ಅವಕಾಶವಿದ್ದಂತ್ತಿಲ್ಲʼ ಎಂದು ಪೀಠ ತಿಳಿಸಿತು. ಯಾದವ್ ಅವರ ಮನವಿಯಿಂದ ಈಗಾಗಲೇ ಎರಡು ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದ್ದು, ಯಾವಾಗ ದೆಹಲಿಗೆ ತಲುಪಿ ಶರಣಾಗಬೇಕು ಎಂಬುದನ್ನೂ ಸ್ಪಷ್ಟವಾಗಿ ಸೂಚಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿತು.





