
ಚಂಡೀಗಢ: ಅಮೃತಸರದಲ್ಲಿ ಕಾಲ್ ಸೆಂಟರ್ ನಡೆಸಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಸುಮಾರು 350 ಕೋಟಿ ರೂಪಾಯಿಗಿಂತ ಹೆಚ್ಚಿನ ವಂಚನೆ ಮಾಡಿದ ಮೂವರು ಆರೋಪಿಗಳನ್ನು ಸಿಬಿಐ ಬಂಧಿಸಿದೆ.
ಖಾಲ್ಸಾ ಮಹಿಳಾ ಕಾಲೇಜಿನ ಎದುರಿನ ಗ್ಲೋಬಲ್ ಟವರ್ನಲ್ಲಿ ‘ಡಿಜಿಕಾಪ್ಸ್ ದಿ ಫ್ಯೂಚರ್ ಆಫ್ ಡಿಜಿಟಲ್’ ಎಂಬ ಹೆಸರಿನಲ್ಲಿ ಆರೋಪಿಗಳು ಕಾಲ್ ಸೆಂಟರ್ ನಡೆಸುತ್ತಿದ್ದರು. 2023ರಿಂದ ಅಮೆರಿಕದ ನಾಗರಿಕರಿಂದ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಲಾಗಿತ್ತು. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಿಬಿಐ, ಈ ವಂಚನಾ ಜಾಲದ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಬಂಧಿತರನ್ನು ಜಿಗರ್ ಅಹ್ಮದ್, ಯಶ್ ಖುರಾನಾ ಮತ್ತು ಇಂದರ್ಜೀತ್ ಸಿಂಗ್ ಬಾಲಿ ಎಂದು ಗುರುತಿಸಲಾಗಿದೆ. ಆರೋಪಿಗಳು ವಿಶೇಷ ಸಾಫ್ಟ್ವೇರ್ ಬಳಸಿ ಅಮೆರಿಕದ ಪ್ರಜೆಗಳ ಕಂಪ್ಯೂಟರ್ ಹಾಗೂ ಬ್ಯಾಂಕ್ ಖಾತೆಗಳಿಗೆ ನುಗ್ಗುತ್ತಿದ್ದರು. ನಂತರ, “ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಯಿದೆ, ಹಣವನ್ನು ಕ್ರಿಪ್ಟೋ ಕರೆನ್ಸಿಗೆ ವರ್ಗಾಯಿಸಿ” ಎಂದು ಹೇಳಿ ಮೋಸ ಮಾಡುತ್ತಿದ್ದರು. ಬಲಿಪಶುಗಳು ಹಣ ವರ್ಗಾಯಿಸುತ್ತಿದ್ದಂತೆ ವಂಚಕರು ಅದನ್ನು ಕಬಳಿಸುತ್ತಿದ್ದರು.
ಮತ್ತಷ್ಟು ಓದಿ: ಬಾನು ಮುಷ್ತಾಕ್ರಿಂದ ದಸರಾ ಉದ್ಘಾಟನೆ ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್
ಬಂಧಿತರ ಬಳಿಯಿಂದ 54 ಲಕ್ಷ ರೂಪಾಯಿ ನಗದು, ಎಂಟು ಮೊಬೈಲ್ ಫೋನ್ಗಳು ಹಾಗೂ ಲ್ಯಾಪ್ಟಾಪ್ಗಳೊಂದಿಗೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 18ರಂದು ಎಫ್ಐಆರ್ ದಾಖಲಾಗಿದ್ದು, ಬಳಿಕ ಸಿಬಿಐ ಆಗಸ್ಟ್ 20ರಿಂದ ಅಮೃತಸರ ಮತ್ತು ದೆಹಲಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತು.





