ರಾಯಚೂರಿಗೆ 13ನೇ ಕೆಎಸ್‌ಆರ್‌ಪಿ ಪಡೆ ಸ್ಥಾಪನೆಗೆ ಒತ್ತಾಯ; ಯುವ ಹೋರಾಟಗಾರ ಅರುಣ್ ಭೂಪಾಲ್ ಅವರಿಂದ ಸಿಎಂಗೆ ಬಹಿರಂಗ ಪತ್ರ

0
6
Advertisement

ರಾಯಚೂರು, ಫೆ.12: ರಾಯಚೂರು ಜಿಲ್ಲೆಯಲ್ಲಿ 13ನೇ ಕೆಎಸ್‌ಆರ್‌ಪಿ ಪಡೆಯನ್ನು ಸ್ಥಾಪಿಸಬೇಕೆಂದು ಯುವ ಹೋರಾಟಗಾರ ಅರುಣ್ ಭೂಪಾಲ್ ಅವರು ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಪತ್ರ ಖಾಕಿ ವಲಯ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಭದ್ರತಾ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅವರು, “ಮಹಾನಗರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಮೀಸಲಿಡುವ ಸರ್ಕಾರ, ಗಡಿಭಾಗದ ಜಿಲ್ಲೆಗಳಿಗೆ ಕನಿಷ್ಠ ಭದ್ರತಾ ವ್ಯವಸ್ಥೆ ಒದಗಿಸಲು ಯಾಕೆ ಹಿಂದೇಟು ಹಾಕುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಆಂಧ್ರ–ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಶಾಶ್ವತ ಕೆಎಸ್‌ಆರ್‌ಪಿ ಪಡೆಯ ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ವಿ.ವಿ.ಐ.ಪಿ ಭೇಟಿಗಳು, ರಾಜಕೀಯ ಸಮಾವೇಶಗಳು, ಧಾರ್ಮಿಕ ಜಾತ್ರೆಗಳು, ಹಟ್ಟಿ ಚಿನ್ನದ ಗಣಿ, ಶಕ್ತಿನಗರ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಉದ್ದೇಶಿತ ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ಭದ್ರತಾ ಸವಾಲು ಹೆಚ್ಚುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಕಲಬುರಗಿ ಅಥವಾ ಮುನಿರಾಬಾದ್‌ನಿಂದ ಪಡೆ ಬರಲು ನಾಲ್ಕು ಗಂಟೆಗಳವರೆಗೆ ಸಮಯ ಹಿಡಿಯುತ್ತಿರುವುದು ಆತಂಕಕಾರಿ ಎಂದು ಅರುಣ್ ಭೂಪಾಲ್ ಅಭಿಪ್ರಾಯಪಟ್ಟಿದ್ದಾರೆ. ಕಲ್ಯಾಣ ಕರ್ನಾಟಕದ 25 ಶಾಸಕರು ಒಟ್ಟಾಗಿ ಮನವಿ ಸಲ್ಲಿಸಿದ್ದರೂ ಹಣಕಾಸು ಇಲಾಖೆ ಎರಡನೇ ಬಾರಿ ಪ್ರಸ್ತಾವನೆ ತಿರಸ್ಕರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಗತ್ಯ ಭೂಮಿ ಹಾಗೂ ಅನುದಾನದ ವ್ಯವಸ್ಥೆ ಇದ್ದರೂ ಅನುಮತಿ ನೀಡದಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಐಆರ್‌ಬಿ–ಕೆಎಸ್‌ಆರ್‌ಪಿ ಪ್ರತ್ಯೇಕೀಕರಣದ ನಂತರ ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ ನೇಮಕವಾದ ಸಿಬ್ಬಂದಿಗೆ ಪದೋನ್ನತಿ ಸಿಗದೆ ನಿವೃತ್ತಿಯಾಗುತ್ತಿರುವ ವಿಚಾರವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಬಜೆಟ್‌ನಲ್ಲಿ ರಾಯಚೂರಿನಲ್ಲಿ 13ನೇ ಕೆಎಸ್‌ಆರ್‌ಪಿ ಪಡೆಯ ಘೋಷಣೆ ಮಾಡಬೇಕು. ಇದು ಕೇವಲ ಒತ್ತಾಯವಲ್ಲ, ಸಂವಿಧಾನಬದ್ಧ ಹಕ್ಕು ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಸರ್ಕಾರದ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ.

Advertisement

LEAVE A REPLY

Please enter your comment!
Please enter your name here