ಹತ್ತು ನಿಮಿಷಗಳ ಡೆಲಿವರಿ ಯೋಜನೆಯನ್ನು ಕೈಬಿಟ್ಟ ಬ್ಲಿಂಕ್ ಇಟ್; ಡೆಲಿವರಿ ಸಿಬ್ಬಂದಿಗಳಿಗೆ ಬಿಗ್ ರಿಲೀಫ್!

0
15
Advertisement

ನವದೆಹಲಿ, ಜ.13: ಗ್ರಾಹಕರಿಗೆ ಅತೀ ಕಡಿಮೆ ಸಮಯದಲ್ಲಿ ವಸ್ತುಗಳು ಹಾಗೂ ಆಹಾರವನ್ನು ತಲುಪಿಸುವ ಭರವಸೆ ನೀಡುತ್ತಿದ್ದ ಬ್ಲಿಂಕ್‌ಇಟ್‌, ಝೆಪ್ಟೊ, ಸ್ವಿಗ್ಗಿ, ಜೊಮಾಟೊ ಸೇರಿದಂತೆ ಪ್ರಮುಖ ಇ-ಕಾಮರ್ಸ್ ವೇದಿಕೆಗಳ ‘10 ನಿಮಿಷ ವಿತರಣೆ’ ಮಾದರಿಯ ಕುರಿತು ಡೆಲಿವರಿ ಸಿಬ್ಬಂದಿಯ ಸುರಕ್ಷತೆ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದ್ದು, ಡೆಲಿವರಿ ಬಾಯ್‌ಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವಂತೆ ಸೂಚಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಭೆಯ ಬಳಿಕ 10 ನಿಮಿಷಗಳ ವಿತರಣಾ ಗಡುವನ್ನು ಕೈಬಿಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಅದರಂತೆ, ಬ್ಲಿಂಕ್‌ಇಟ್‌ ತನ್ನ 10 ನಿಮಿಷಗಳ ವಿತರಣಾ ಭರವಸೆಯನ್ನು ಅಧಿಕೃತವಾಗಿ ಕೈಬಿಟ್ಟಿದೆ. ಮುಂಬರುವ ದಿನಗಳಲ್ಲಿ ಇತರ ವೇದಿಕೆಗಳೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಡೆಲಿವರಿ ಸಿಬ್ಬಂದಿಯ ಸುರಕ್ಷತೆ ವಿಷಯವನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗಿತ್ತು. ಆಮ್‌ ಆದ್ಮಿ ಪಾರ್ಟಿ (ಎಎಪಿ) ಸಂಸದ ರಾಘವ್ ಚಡ್ಡಾ, 10 ನಿಮಿಷಗಳಲ್ಲಿ ಆಹಾರ ಮತ್ತು ವಸ್ತುಗಳನ್ನು ತಲುಪಿಸುವ ಒತ್ತಡದಿಂದ ವಿತರಣೆ ಮಾಡುವವರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ವೇಗದ ಸೇವೆಗಿಂತಲೂ ಅದರ ಮಾನವೀಯ ಬೆಲೆ ಬಗ್ಗೆ ಸರ್ಕಾರ ಮತ್ತು ಕಂಪನಿಗಳು ಚಿಂತಿಸಬೇಕು ಎಂದು ಅವರು ಆಗ್ರಹಿಸಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಜನವರಿ 12ರಂದು ರಾಘವ್ ಚಡ್ಡಾ ಬ್ಲಿಂಕ್‌ಇಟ್‌ ಡೆಲಿವರಿ ಸಿಬ್ಬಂದಿಯ ಸಮವಸ್ತ್ರ ಧರಿಸಿ ಸ್ವತಃ ಆರ್ಡರ್‌ಗಳನ್ನು ತಲುಪಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು. “ಬೋರ್ಡ್ ರೂಂಗಳಿಂದ ತಳಮಟ್ಟಕ್ಕೆ: ಒಂದು ದಿನ ಡೆಲಿವರಿ ಬಾಯ್‌ಗಳ ಜೊತೆ” ಎಂಬ ಶೀರ್ಷಿಕೆಯಲ್ಲಿ ಅವರು ವಿಡಿಯೊ ಪೋಸ್ಟ್ ಮಾಡಿ, ವಿತರಣೆ ಸಿಬ್ಬಂದಿಯ ದಿನನಿತ್ಯದ ಸಂಕಷ್ಟಗಳತ್ತ ಸಾರ್ವಜನಿಕರ ಗಮನ ಸೆಳೆದಿದ್ದರು.

ಇದರ ನಡುವೆಯೇ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇತ್ತೀಚೆಗೆ ನಾಲ್ಕು ಕಾರ್ಮಿಕ ಸಂಹಿತೆಗಳ ಕರಡು ನಿಯಮಗಳನ್ನು ಪ್ರಕಟಿಸಿದೆ. ಇದರಲ್ಲಿ ಡೆಲಿವರಿ ಸಿಬ್ಬಂದಿಗೆ ಕನಿಷ್ಠ ವೇತನ, ಆರೋಗ್ಯ ಸೌಲಭ್ಯ, ಉದ್ಯೋಗ ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒಳಗೊಂಡಿವೆ. ಏಪ್ರಿಲ್ 1ರಿಂದ ನಾಲ್ಕೂ ಕಾರ್ಮಿಕ ನಿಯಮಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

ಇನ್ನೊಂದೆಡೆ, ಡಿಸೆಂಬರ್ 25ರಂದು ವಿತರಣಾ ವೇದಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಘಗಳು ಉತ್ತಮ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಬೇಡಿಕೆಗಳು ಈಡೇರದಿದ್ದರೆ ಡಿಸೆಂಬರ್ 31ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅವರ ಪ್ರಮುಖ ಬೇಡಿಕೆಗಳಲ್ಲಿ ಸಮಯ ಆಧಾರಿತ ವಿತರಣಾ ಗುರಿಗಳನ್ನು ರದ್ದುಪಡಿಸುವುದೂ ಸೇರಿತ್ತು.

ಈ ಪ್ರತಿಭಟನೆಯ ಬೆನ್ನಲ್ಲೇ ಸ್ವಿಗ್ಗಿ ಹಾಗೂ ಜೊಮಾಟೊ ವಿತರಣೆ ಸಿಬ್ಬಂದಿಗೆ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಿವೆ. ಆದರೂ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಮತ್ತಷ್ಟು ಬೃಹತ್ ಆಂದೋಲನಕ್ಕೆ ಇಳಿಯುವುದಾಗಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.

Advertisement

LEAVE A REPLY

Please enter your comment!
Please enter your name here