‘ಭಾರತ್ ಟ್ಯಾಕ್ಸಿ’ ಆಪ್‌ಗೆ ಚಾಲನೆ: ಮೊದಲ ರೈಡ್ ಗಾಗಿ ಬುಕ್ಕಿಂಗ್ ಹೇಗೆ?!

0
2
Advertisement

ನವದೆಹಲಿ, ಫೆ.05: ದೇಶದ ಕ್ಯಾಬ್ ಸೇವಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ‘ಭಾರತ್ ಟ್ಯಾಕ್ಸಿ’ ಸೇವೆಗೆ ಇಂದು ಅಧಿಕೃತ ಚಾಲನೆ ದೊರಕಿತು. ಸಹಕಾರ ಸಚಿವಾಲಯದ ಬೆಂಬಲದೊಂದಿಗೆ ಆರಂಭಗೊಂಡಿರುವ ಈ ಟ್ಯಾಕ್ಸಿ ಆಪ್‌ನ್ನು ಇಂದು ಮಧ್ಯಾಹ್ನ ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು.

ಖಾಸಗಿ ಕ್ಯಾಬ್ ಸೇವೆಗಳಿಗೆ ಭಿನ್ನವಾಗಿ, ಈ ಸೇವೆಯನ್ನು ಚಾಲಕರೇ ಮಾಲೀಕರಾಗಿರುವ ಸಹಕಾರ ಸಂಘದ ಮೂಲಕ ನಡೆಸಲಾಗುತ್ತಿದೆ. ಚಾಲಕರಿಗೆ ಸಂಬಳ ಹಾಗೂ ನಿರ್ವಹಣಾ ವ್ಯವಸ್ಥೆಯಲ್ಲಿ ಬದಲಾವಣೆ ತರುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಸೇವೆ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರೆ ಪ್ರಮುಖ ನಗರಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

ಚಾಲಕರೇ ಮಾಲೀಕರು

ಭಾರತ್ ಟ್ಯಾಕ್ಸಿ ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್ ಬುಕ್ಕಿಂಗ್ ಆಪ್ ಆಗಿದ್ದು, ಇದನ್ನು ಸಹಕಾರಿ ಸಂಘ ನಡೆಸುತ್ತಿದೆ. ಈ ವ್ಯವಸ್ಥೆಯಲ್ಲಿ ಚಾಲಕರು ಸಂಘದ ಸದಸ್ಯರಾಗಿದ್ದು, ಪ್ರತಿಯೊಬ್ಬ ಚಾಲಕನೂ ಸಂಘದಲ್ಲಿ ಷೇರುಗಳನ್ನು ಹೊಂದಿರುತ್ತಾನೆ. ಚಾಲಕರನ್ನು ‘ಸಾರಥಿ’ ಎಂದು ಕರೆಯಲಾಗುತ್ತದೆ.

ಪ್ರತಿ ಪ್ರಯಾಣದ ಮೇಲೆ ಕಮಿಷನ್ ಕಡಿತ ಮಾಡುವ ಪದ್ಧತಿ ಇಲ್ಲ. ಬದಲಾಗಿ, ಆಪ್ ಬಳಕೆಗೆ ಚಾಲಕರು ಪ್ರತಿದಿನ ನಿಗದಿತ ಶುಲ್ಕವನ್ನು ಪಾವತಿಸಬೇಕು. ಇದರಿಂದ ಶೇಕಡಾವಾರು ಕಡಿತದ ಹೊರೆ ತಪ್ಪಿ, ಚಾಲಕರ ಆದಾಯ ಸ್ಥಿರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಬುಕ್ಕಿಂಗ್ ವಿಧಾನ ಸರಳ

ಭಾರತ್ ಟ್ಯಾಕ್ಸಿ ಆಪ್ ಇತರೆ ಕ್ಯಾಬ್ ಬುಕ್ಕಿಂಗ್ ಆಪ್‌ಗಳಂತೆ ಸರಳವಾಗಿದೆ. ಬಳಕೆದಾರರು ಆಪ್ ಡೌನ್‌ಲೋಡ್ ಮಾಡಿ ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಂಡು, ಪಿಕಪ್ ಮತ್ತು ಡ್ರಾಪ್ ಸ್ಥಳವನ್ನು ನಮೂದಿಸಿದರೆ ಲಭ್ಯವಿರುವ ವಾಹನಗಳ ವಿವರ ಪಡೆಯಬಹುದು.

ಎಸಿ ಹಾಗೂ ನಾನ್-ಎಸಿ ಕಾರುಗಳು, ದೊಡ್ಡ ವಾಹನಗಳು, ಆಟೋ ಮತ್ತು ಬೈಕ್ ಟ್ಯಾಕ್ಸಿ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿವೆ. ಪಾವತಿ ಮತ್ತು ಬುಕ್ಕಿಂಗ್ ಪ್ರಕ್ರಿಯೆಯೂ ಸುಲಭವಾಗಿದೆ.

ಭದ್ರತೆಗೂ ಒತ್ತು

ಚಾಲಕರ ಪರಿಶೀಲನೆ, ಸಹಾಯವಾಣಿ ಸೇವೆ ಹಾಗೂ ಪೊಲೀಸರ ಸಹಕಾರದೊಂದಿಗೆ ದೂರು ಕೇಂದ್ರಗಳ ವ್ಯವಸ್ಥೆಯನ್ನು ಈ ಆಪ್ ಒಳಗೊಂಡಿದೆ. ದೆಹಲಿಯ ಎನ್‌ಸಿಆರ್‌ನಲ್ಲಿ ಆರಂಭವಾದ ಬಳಿಕ ಹಂತ ಹಂತವಾಗಿ ಇತರೆ ಪ್ರದೇಶಗಳಲ್ಲೂ ಸೇವೆ ವಿಸ್ತರಿಸುವ ಯೋಜನೆ ಇದೆ.

ಸಹಕಾರಿ ತತ್ವದ ಆಧಾರದಲ್ಲಿ ಆರಂಭಗೊಂಡಿರುವ ಈ ಸೇವೆ, ದೇಶದ ಕ್ಯಾಬ್ ಕ್ಷೇತ್ರದಲ್ಲಿ ಹೊಸ ಪರ್ಯಾಯವಾಗಿ ಬೆಳೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ

Advertisement

LEAVE A REPLY

Please enter your comment!
Please enter your name here