
ಬೆಂಗಳೂರು, ಏಪ್ರಿಲ್ 8: ನಗರದ ಜೀವನಾಡಿಯಾಗಿರುವ ಅರ್ಕಾವತಿ ನದಿ ಹಾಗೂ ಅದರ ವ್ಯಾಪ್ತಿಯಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸಲು ‘ಅಲಂಕಾರ್’ (ALANCAR – Arkavathi Lakes and Catchment Area Rejuvenation) ಮಿಷನ್ ಆರಂಭಿಸಲಾಗಿದೆ ಎಂದು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಬಿಜ್ಜವರ ಎಚ್. ಲೋಕೇಶ್ ತಿಳಿಸಿದ್ದಾರೆ.
ಸ್ನೇಹಿತರ ಬಳಗ ಹಾಗೂ ಆಲ್ಟ್ ಟೆಕ್ ಫೌಂಡೇಶನ್ (AltTech Foundation) ಜೊತೆ ಕೈಜೋಡಿಸಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿರುವುದಾಗಿ ಅವರು ಹೇಳಿದ್ದಾರೆ.
ಅರ್ಕಾವತಿ ನದಿ ಮತ್ತು ಅದರ ಹರಿವು ಪ್ರದೇಶದಲ್ಲಿರುವ ಎಲ್ಲಾ ಕೆರೆಗಳನ್ನು ವೈಜ್ಞಾನಿಕವಾಗಿ ಶುಚಿಗೊಳಿಸುವುದು, ನೀರು ಮತ್ತು ಮಣ್ಣಿನ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಪರಿಸರ ಸಮತೋಲನವನ್ನು ಪುನಃಸ್ಥಾಪಿಸುವುದು ಈ ಮಿಷನ್‌ನ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯಡಿ ಪ್ರತಿದಿನ ಸುಮಾರು 180 ಮಿಲಿಯನ್ ಲೀಟರ್ ಮಲಿನ ನೀರನ್ನು ಶುದ್ಧೀಕರಿಸುವ ಮೂಲಕ ಬೆಂಗಳೂರಿನ ಒಟ್ಟು ಮಲಿನ ನೀರಿನ ಸುಮಾರು 10 ಶೇಕಡಾ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಅಲಂಕಾರ್ ಮಿಷನ್‌ಗೆ ವಂದೇ ಭಾರತಂ ಫೌಂಡೇಶನ್, ನೌಲ್ಗಿ (Nualgi), ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ (Indian Plumbing Association) ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿವೆ.
ಸಾರ್ವಜನಿಕರಿಗೆ ಕರೆ ನೀಡಿದ ಲೋಕೇಶ್ ಅವರು, “ಈ ಕಾರ್ಯಕ್ಕೆ ಜಾತಿ, ಧರ್ಮ ಅಥವಾ ರಾಜಕೀಯ ಬೇಧವಿಲ್ಲದೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯವೆಂದು ಕೈಜೋಡಿಸಬೇಕು. ಪರಿಸರ ಹಾನಿಯ ಪರಿಣಾಮವಾಗಿ ಇತ್ತೀಚೆಗೆ ಕ್ಯಾನ್ಸರ್ ಸೇರಿದಂತೆ ಗಂಭೀರ ರೋಗಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಪರಿಸ್ಥಿತಿ ಮತ್ತಷ್ಟು ಹದಗೆಡುವುದಕ್ಕೆ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು,” ಎಂದು ತಿಳಿಸಿದ್ದಾರೆ.
ಅರ್ಕಾವತಿ ನದಿ ಪುನಶ್ಚೇತನದ ಮೂಲಕ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಒದಗಿಸುವುದು ಈ ಮಿಷನ್‌ನ ಪ್ರಮುಖ ಗುರಿಯಾಗಿದೆ. ಇದನ್ನು ನಾವು ದೇವತಾ ಕಾರ್ಯವೆಂದು ಪರಿಗಣಿಸಿ, ಕೊಡಲೇ ಕಾರ್ಯಪ್ರವೃತ್ತರಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಸ್ವಲ್ಪವಾದರೂ ಕ್ಷಮಿಸಬಹುದು. ಅವರು ಪೂರ್ಣಪ್ರಮಾಣದಲ್ಲಿ ಕ್ಷಮಿಸದಷ್ಟು ಅನ್ಯಾಯ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ‘ಅಲಂಕಾರ್’ ಯೋಜನೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.





