
ಬೆಂಗಳೂರು, ಜ.07: ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸುವ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ತಲುಪಿಸುವ ಉದ್ದೇಶದಿಂದ, ರಾಜ್ಯ ಸರ್ಕಾರವು ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಶಾಖೆಗಳನ್ನು ತೆರೆಯುವ ಕುರಿತಂತೆ ಅರ್ಜಿ ಆಹ್ವಾನಿಸಿದೆ.
ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ನಾಗರಿಕ ಸೇವೆಗಳನ್ನು ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಜನನ–ಮರಣ ಪ್ರಮಾಣಪತ್ರ, ಆದಾಯ, ಜಾತಿ, ನಿವಾಸ ಪ್ರಮಾಣಪತ್ರ ಸೇರಿದಂತೆ ಹಲವು ಸರ್ಕಾರಿ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯುವ ವ್ಯವಸ್ಥೆ ಗ್ರಾಮ ಒನ್ ಮೂಲಕ ಲಭ್ಯವಾಗಲಿದೆ.
ರಾಜ್ಯ ಸರ್ಕಾರದ ಇಡಿಸಿಎಸ್ ನಿರ್ದೇಶನಾಲಯ (ಇ–ಆಡಳಿತ) ವತಿಯಿಂದ ಈ ಸಂಬಂಧ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಸೂಕ್ತ ಸೇವೆ ಒದಗಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಆಸಕ್ತರು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಯಾರು ಅರ್ಜಿ ಸಲ್ಲಿಸಬಹುದು?
ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಭ್ಯರ್ಥಿಯು ಕನಿಷ್ಠ ದ್ವಿತೀಯ ಪಿಯುಸಿ ಶಿಕ್ಷಣವನ್ನು/ಸಮನಾದ ಶಿಕ್ಷಣ ಅರ್ಹತೆ ಹೊಂದಿರಬೇಕು.
ಅರ್ಜಿದಾರ ಅಭ್ಯರ್ಥಿಯು ಗ್ರಾಮ ಒನ್ ಕೇಂದ್ರವನ್ನು ಪ್ರಾರಂಭಿಸಲು ಅವಶ್ಯವಿರುವ ಬಂಡವಾಳ ಹೂಡಿಕೆಗೆ ಸಿದ್ದವಿರಬೇಕು.
ಗ್ರಾಮ ಒನ್ ಕೇಂದ್ರ ಪ್ರಾರಂಭಿಸಲು ಇಚ್ಚಿಸಿರುವ ಜಾಗವು ಸಾರ್ವಜನಿಕರಿಗೆ ಸುಲಭವಾಗಿ ಸಂಪರ್ಕಿಸುವಂತಿರಬೇಕು.
ಗ್ರಾಮ ಒನ್ ಕೇಂದ್ರ ಪ್ರಾರಂಭಿಸಲು ಅವಶ್ಯವಿರುವ ಉಪಕರಣಗಳು
ಲ್ಯಾಪ್ ಟಾಪ್/ಡೆಸ್ಕ್ ಟಾಪ್
ಪ್ರಿಂಟರ್
ಬಯೋಮೆಟ್ರಿಕ್ ಸ್ಕ್ಯಾನರ್
ವೆಬ್ ಕ್ಯಾಮರಾ
ವೈ-ಪೈ ರಿಸೀವರ್
ಯುಪಿಎಸ್ ಬ್ಯಾಕಪ್
ಅರ್ಜಿ ಸಲ್ಲಿಸಲು ಬೇಕಾಗಿರುವ ಗುರುತಿನ ಚೀಟಿಗಳು
ಅಭ್ಯರ್ಥಿಯ ಆಧಾರ್ ಕಾರ್ಡ್
ಪಾನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಅಂಗಡಿಯ ಪೋಟೋ
ವಿದ್ಯಾರ್ಹತೆ ಪ್ರಮಾಣ ಪತ್ರ
ಯಾವ ಕೇಂದ್ರಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಹಾಸನ, ಕಲಬುರಗಿ, ಕೊಡಗು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡಗಿನಲ್ಲಿ ಮಡಿಕೇರಿ, ಪೊನ್ನಂಪೇಟೆ, ವಿರಾಜಪೇಟೆ ಮತ್ತು ಸೋಮವಾರ ಪೇಟೆ ತಾಲೂಕುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಈ ಕೆಳಗಿನ ಲಿಂಕ್‌ಗೆ ಹೋಗಿ ವಿವರಗಳನ್ನು ತುಂಬಿ, ತಮ್ಮ ಗ್ರಾಮವನ್ನು ಆರಿಸಿಕೊಳ್ಳುವ ಮೂಲಕ ಸೂಕ್ತ ಪ್ರಮಾಣಪತ್ರಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.
https://kal-mys.gramaone.karnataka.gov.in/index.php/applicant-registration-initial-step





