ಪ್ರಿಯಾಂಕಾ ಶಿವಣ್ಣ ಮದುವೆ ಫಿಕ್ಸ್‌ ಆಯ್ತಾ?!

0
3

ನಟಿ ಪ್ರಿಯಾಂಕಾ ಮದುವೆ ಸುದ್ದಿ ವೈರಲ್‌!

ಬೆಂಗಳೂರು, ಅ.27: ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಸತ್ಯ’ ಮುಗಿದು ವರ್ಷ ಕಳೆದರೂ, ಅದರ ಪಾತ್ರಗಳು ಇಂದಿಗೂ ವೀಕ್ಷಕರ ಮನಸ್ಸಿನಲ್ಲಿ ನೆಲೆಸಿವೆ. ಈ ಧಾರಾವಾಹಿಯಲ್ಲಿ ದಿವ್ಯಾ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಪ್ರಿಯಾಂಕಾ ಶಿವಣ್ಣ ಇದೀಗ ಮದುಮಗಳ ಅಲಂಕಾರದಲ್ಲಿ ಕಾಣಿಸಿಕೊಂಡಿದ್ದು, ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿದೆ. ನಟಿ ಮದುವೆಯಾಗುತ್ತಿದ್ದಾರೆ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಈ ವಿಡಿಯೊ ಕಾರಣವಾಗಿದೆ.

ವಿಡಿಯೊ ನೋಡಿ ಅಭಿಮಾನಿಗಳಲ್ಲಿ ಕುತೂಹಲ

ಪ್ರಿಯಾಂಕಾ ಶಿವಣ್ಣ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮದುಮಗಳ ಅಲಂಕಾರದಲ್ಲಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೊದೊಂದಿಗೆ ಯಾವುದೇ ವಿವರಣೆಯನ್ನು ನೀಡದಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಹಲವರು ನಟಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಮದುವೆ ಹಾಗೂ ನಿಶ್ಚಿತಾರ್ಥದ ಕುರಿತು ಪ್ರಶ್ನಿಸಿದ್ದಾರೆ. ಆದರೆ, ಅಭಿಮಾನಿಗಳ ಯಾವುದೇ ಕಾಮೆಂಟ್‌ಗಳಿಗೆ ನಟಿ ಪ್ರತಿಕ್ರಿಯಿಸಿಲ್ಲ.

ಆದರೆ, ಈ ವಿಡಿಯೊಕ್ಕೂ ಪ್ರಿಯಾಂಕಾ ಅವರ ವೈಯಕ್ತಿಕ ಜೀವನಕ್ಕೂ ಸಂಬಂಧವಿಲ್ಲ. ಇದು ಆಭರಣ ಮಳಿಗೆಯೊಂದರ ಪ್ರಚಾರಕ್ಕಾಗಿ ಚಿತ್ರೀಕರಿಸಿರುವ ಜಾಹೀರಾತು ವಿಡಿಯೊವಾಗಿದೆ. ಮದುವೆಗೆ ಬೇಕಾದ ಆಭರಣಗಳನ್ನು ಎಲ್ಲಿ ಖರೀದಿಸಬಹುದು ಹಾಗೂ ಮಳಿಗೆಯಲ್ಲಿ ಲಭ್ಯವಿರುವ ವಿಶೇಷ ಕೊಡುಗೆಗಳ ಕುರಿತು ಅವರು ಮತ್ತೊಂದು ವಿಡಿಯೊದಲ್ಲಿಯೂ ಮಾಹಿತಿ ನೀಡಿದ್ದಾರೆ. ಹೀಗಾಗಿ, ಮದುವೆಯ ಕುರಿತಾದ ಊಹಾಪೋಹಗಳಿಗೆ ಯಾವುದೇ ಆಧಾರವಿಲ್ಲ.

‘ಅಗ್ನಿಸಾಕ್ಷಿ’ಯಿಂದ ಜನಪ್ರಿಯತೆ

ಕಿರುತೆರೆ ಪ್ರೇಕ್ಷಕರಿಗೆ ಪ್ರಿಯಾಂಕಾ ಶಿವಣ್ಣ ಪರಿಚಯವಾಗಿದ್ದು ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕ. ಈ ಧಾರಾವಾಹಿಯಲ್ಲಿ ನಕಾರಾತ್ಮಕ ಪಾತ್ರದ ಮೂಲಕ ಗಮನ ಸೆಳೆದ ಅವರು, ತಮ್ಮ ವಿಭಿನ್ನ ಅಭಿನಯದಿಂದ ಜನಪ್ರಿಯತೆ ಗಳಿಸಿದರು. ಬಳಿಕ ‘ಸತ್ಯ’ ಧಾರಾವಾಹಿಯಲ್ಲಿ ನಾಯಕಿ ಸತ್ಯಳ ಅಕ್ಕ ದಿವ್ಯಾ ಪಾತ್ರದಲ್ಲಿ ವಿವಿಧ ಭಾವನೆಗಳ ಮೂಲಕ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಕನ್ನಡ ಧಾರಾವಾಹಿಗಳ ಜತೆಗೆ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿಯೂ ಪ್ರಿಯಾಂಕಾ ಸಕ್ರಿಯರಾಗಿದ್ದಾರೆ. ತೆಲುಗಿನ ‘ಕೃಷ್ಣ ತುಳಸಿ’ ಹಾಗೂ ತಮಿಳಿನ ‘ಪಿರಿಯಾದ ವರಂ ವೆಂಡುಂ’ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ಜೂಮ್’ ಮತ್ತು ‘ಫ್ಯಾಂಟಸಿ’ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಮಾಡೆಲಿಂಗ್‌ನಿಂದ ಕಿರುತೆರೆಗೆ

19ನೇ ವಯಸ್ಸಿನಲ್ಲಿ ಮಾಡೆಲಿಂಗ್ ಆರಂಭಿಸಿದ ಪ್ರಿಯಾಂಕಾ, ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ‘ಬಿಗ್‌ಬಾಸ್ ಕನ್ನಡ’ ಏಳನೇ ಆವೃತ್ತಿಯ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು.

ಬೆಂಗಳೂರಿನ ಕೇಂಬ್ರಿಡ್ಜ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಬಳಿಕ ಆಳ್ವಾಸ್‌ನಲ್ಲಿ ವ್ಯಾಸಂಗ ಮಾಡಿ, ಎಸ್‌ಡಿಎಂ ಕಾಲೇಜಿನಲ್ಲಿ ವ್ಯವಹಾರ ನಿರ್ವಹಣೆ ವಿಷಯದಲ್ಲಿ ಪದವಿ ಪಡೆದಿದ್ದಾರೆ.

2013ರಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ ಪ್ರಿಯಾಂಕಾ ಶಿವಣ್ಣ, ತಮ್ಮ ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ವಿವಿಧ ಭಾಷೆಗಳ ಧಾರಾವಾಹಿಗಳು ಹಾಗೂ ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ ಹೊಸ ಲುಕ್‌ನಿಂದ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here