
ಟೆಹ್ರಾನ್, ಏಪ್ರಿಲ್ 8: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಇರಾನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಯುದ್ಧ ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಂಭೀರವಾಗುತ್ತಿರುವುದರಿಂದ, “ತಕ್ಷಣ ದೇಶ ತೊರೆಯಿರಿ” ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಬಲವಾದ ಸೂಚನೆ ನೀಡಿದೆ.
ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಭಾರತೀಯರು ಲಭ್ಯವಿರುವ ಸುರಕ್ಷಿತ ಮಾರ್ಗಗಳನ್ನು ಬಳಸಿಕೊಂಡು ವಿಳಂಬ ಮಾಡದೆ ಇರಾನ್ ತೊರೆಯುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ರಾಯಭಾರ ಕಚೇರಿಯೊಂದಿಗೆ ಸಮನ್ವಯವಿಲ್ಲದೆ ಯಾವುದೇ ಅಂತರರಾಷ್ಟ್ರೀಯ ಗಡಿಗಳನ್ನು ಸಮೀಪಿಸಲು ಪ್ರಯತ್ನಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ತುರ್ತು ನೆರವಿಗಾಗಿ ಸಹಾಯವಾಣಿ ಸಂಖ್ಯೆಗಳನ್ನೂ ಪ್ರಕಟಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳ ನಂತರವೇ ಭಾರತ ಈ ಸೂಚನೆಯನ್ನು ನೀಡಿರುವುದು ಗಮನಾರ್ಹ. ಫೆಬ್ರುವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ಬಳಿಕ ಈ ಸಂಘರ್ಷ ಆರಂಭವಾಗಿತ್ತು. ಆರಂಭದಲ್ಲಿ ಸುಮಾರು 9,000 ಭಾರತೀಯರು ಇರಾನ್‌ನಲ್ಲಿ ನೆಲೆಸಿದ್ದರೆ, ಈಗಾಗಲೇ ಸುಮಾರು 1,800 ಮಂದಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
ಪಾಕ್ ಮಧ್ಯಸ್ಥಿಕೆಯಿಂದ ತಾತ್ಕಾಲಿಕ ವಿರಾಮ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ನೀಡಿದ್ದ ಗಡುವು ಮುಗಿಯುವ ಮುನ್ನವೇ ಕದನ ವಿರಾಮಕ್ಕೆ ಒಪ್ಪಿಗೆ ದೊರೆತಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮಧ್ಯಸ್ಥಿಕೆ ವಹಿಸಿದ್ದರಿಂದ ಈ ತಾತ್ಕಾಲಿಕ ವಿರಾಮ ಸಾಧ್ಯವಾಯಿತು.
ಫೆಬ್ರುವರಿ 28ರಿಂದ ನಡೆಯುತ್ತಿರುವ ಈ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ವಾಷಿಂಗ್ಟನ್ ಜೊತೆ ನೇರ ಮಾತುಕತೆಗೆ ಇರಾನ್ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಆದರೆ ಈ ಎರಡು ವಾರಗಳ ವಿರಾಮ ಶಾಶ್ವತ ಶಾಂತಿಗೆ ದಾರಿಯಾಗುತ್ತದೆಯೇ ಅಥವಾ ಮುಂದಿನ ಸಂಘರ್ಷಕ್ಕೆ ಮುನ್ನಿನ ಮೌನವೋ ಎಂಬ ಆತಂಕ ಮುಂದುವರಿದಿದೆ.
ಈ ಹಿನ್ನೆಲೆ, ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಇರಾನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯವನ್ನು ಭಾರತ ಸರ್ಕಾರ ವೇಗಗೊಳಿಸಿದೆ.





