
ಮಲ್ಲ, ಮಾರ್ಚ್ 26: ಕಾಸರಗೋಡು ತಾಲೂಕಿನ ಮುಳಿಯಾರು ಗ್ರಾಮದ ಪುಂಜಗೋಡು ಸಮೀಪದ ಪ್ರಸಿದ್ಧ ಶ್ರೀ ಮಾಞ್ಞಳಮ್ಮ ವಿಷ್ಣುಮೂರ್ತಿ ತರವಾಡು ದೈವಸ್ಥಾನದಲ್ಲಿ 20 ವರ್ಷಗಳ ಬಳಿಕ ನವೀಕರಣಗೊಂಡ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 26ರಿಂದ 29ರವರೆಗೆ ಭಕ್ತಿಭಾವದಿಂದ ವಿಜೃಂಭಣೆಯಿಂದ ನಡೆಯುತ್ತಿದೆ.
ಸುಮಾರು 175 ವರ್ಷಗಳ ಇತಿಹಾಸ ಹೊಂದಿರುವ ಈ ದೈವಸ್ಥಾನವು ಯಾದವ ಸಮುದಾಯದ ಆರು ಇಲ್ಲಂಗಳ ಪೈಕಿ ‘ಪಚ್ಚೆಮಾರ್’ ಪರಂಪರೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಕಲಿಯುಗದ ಕಾರ್ಣಿಕ ದೈವಸಾನಿಧ್ಯವೆಂದು ಭಕ್ತರು ನಂಬಿಕೆ ಹೊಂದಿದ್ದಾರೆ. ಮಲ್ಲದ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪೂರ್ವಕ್ಕೆ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಈ ತರವಾಡು ದೈವಸ್ಥಾನವು ಇತ್ತೀಚೆಗೆ ಪುನರ್‌ನಿರ್ಮಾಣಗೊಂಡಿದ್ದು, ಮಹೋತ್ಸವದ ಸಂಭ್ರಮ ಆವರಿಸಿದೆ.

ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಮದನೆಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದದಲ್ಲಿ, ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ರವೀಶ್ ತಂತ್ರಿ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಮಾರ್ಚ್ 26ರಂದು ಬೆಳಗ್ಗೆ 9:30ಕ್ಕೆ ಮಲ್ಲದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹಸಿವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಿತು. ಬಳಿಕ ಉಗ್ರಾಣ ಮುಹೂರ್ತ, ದೀಪಪ್ರಜ್ವಲನೆ, ಭಕ್ತಿಗಾನ, ಅನ್ನಸಂತರ್ಪಣೆ, ಭರತನಾಟ್ಯ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಿದವು. ಸಂಜೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಿ, ವಾಸ್ತುಹೋಮ, ರಾಠೋಘ್ನ ಹೋಮ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿಸಲ್ಪಟ್ಟವು.
ಮಾರ್ಚ್ 27ರಂದು ಬೆಳಿಗ್ಗೆ ಗಣಪತಿ ಹವನದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡವು. ಬಳಿಕ ಜಗದ್ಗುರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಶುಭ ವೃಷಭ ಲಗ್ನದಲ್ಲಿ ತರವಾಡು ಗೃಹಪ್ರವೇಶ, ಶ್ರೀ ಮಾಂಜಳಮ್ಮ, ವಿಷ್ಣುಮೂರ್ತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನೆರವೇರಿತು. ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ, ಹರಿಕಥೆ, ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವೂ ಆಯೋಜಿಸಲಾಗಿದೆ.
ಮಾರ್ಚ್ 28 ಮತ್ತು 29ರ ಕಾರ್ಯಕ್ರಮಗಳು
ಮಾರ್ಚ್ 28 ಹಾಗೂ 29ರಂದು ನಾಗದೇವರಿಗೆ ತಂಬಿಲ, ಹರಿಸೇವೆ, ತುಲಾಭಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಕೊರತ್ತಿ ಅಮ್ಮ, ಮಾಞ್ಞಳಮ್ಮ, ವಿಷ್ಣುಮೂರ್ತಿ ಹಾಗೂ ಗುಳಿಗ ದೈವಗಳ ಕೋಲ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.
ಈ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ದೈವಭಕ್ತಿ ಮತ್ತು ಸಾಂಸ್ಕೃತಿಕ ವೈಭವ ಒಂದೇ ವೇದಿಕೆಯಲ್ಲಿ ಮೈಗೂಡುತ್ತಿರುವುದು ವಿಶೇಷವಾಗಿದೆ.





