ಭಾರತ–ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ: ಗಗನಕ್ಕೇರಿದ ಕೊಲಂಬೊ ವಿಮಾನ ದರ!

0
46

ಕೊಲಂಬೊ, ಫೆ.10: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ನಡೆಯಲಿರುವ ಭಾರತ–ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರಿದ್ದು, ಅದರ ಪರಿಣಾಮವಾಗಿ ವಿಮಾನ ದರಗಳು ಏಕಾಏಕಿ ಗಗನಕ್ಕೇರಿವೆ.

ಪಂದ್ಯ ದೃಢಪಟ್ಟ ಕೆಲವೇ ನಿಮಿಷಗಳಲ್ಲಿ ಮುಂಬೈನಿಂದ ಕೊಲಂಬೊಗೆ ಪ್ರಯಾಣಿಸುವ ವಿಮಾನ ಟಿಕೆಟ್ ದರವು ಸರಾಸರಿ ರೂ.10,000ರವರೆಗೆ ಏರಿಕೆಯಾಗಿದೆ.

ಫೆಬ್ರವರಿ 15ರಂದು ನಡೆಯಲಿರುವ ಈ ಬಹುನಿರೀಕ್ಷಿತ ಪಂದ್ಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಭಾಗಗಳಿಂದ ಅಭಿಮಾನಿಗಳು ಶ್ರೀಲಂಕಾಕ್ಕೆ ತೆರಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ಪರಿಣಾಮವಾಗಿ ಮುಂಬೈ–ಕೊಲಂಬೊ–ಮುಂಬೈ ರೌಂಡ್ ಟ್ರಿಪ್‌ಗೆ ಈಗ ಸುಮಾರು ರೂ.60,000 ವೆಚ್ಚವಾಗುತ್ತಿದೆ ಎಂದು ಪ್ರಯಾಣ ಸಂಸ್ಥೆಗಳು ತಿಳಿಸಿವೆ.

ಹೈಪ್ರೊಫೈಲ್ ಪಂದ್ಯವನ್ನು ಬಹಿಷ್ಕರಿಸುವ ಕುರಿತು ಪಾಕಿಸ್ತಾನ ಸರ್ಕಾರ ಹಿಂದೆ ಕೈಗೊಂಡಿದ್ದ ನಿರ್ಧಾರವನ್ನು ಹಿಂತೆಗೆದುಕೊಂಡ ನಂತರವೇ ದರ ಏರಿಕೆ ಆರಂಭವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಶ್ರೀಲಂಕಾ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಡುವಿನ ಬ್ಯಾಕ್-ಚಾನೆಲ್ ಚರ್ಚೆಗಳ ಬಳಿಕ ಪಾಕಿಸ್ತಾನವು ಭಾರತ ವಿರುದ್ಧ ಕಣಕ್ಕಿಳಿಯಲು ಒಪ್ಪಿಗೆ ನೀಡಿದೆ. ಇದರಿಂದ ಪಂದ್ಯಾವಳಿಯ ಅತ್ಯಂತ ಲಾಭದಾಯಕ ಹಾಗೂ ಕುತೂಹಲಕಾರಿ ಪಂದ್ಯ ಕುರಿತ ಅನಿಶ್ಚಿತತೆ ತೆರೆದುಹೋಗಿದೆ.

ಈ ಕುರಿತು ಶೆಹಬಾಜ್ ಷರೀಫ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಣೆ ಹೊರಡಿಸಿದ್ದು, ಸ್ನೇಹಪರ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಯುಎಇಗಳಿಂದ ಬಂದ ವಿನಂತಿಗಳು ಮತ್ತು ಬಹುಪಕ್ಷೀಯ ಚರ್ಚೆಗಳ ಫಲವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 2026ರ ಫೆಬ್ರವರಿ 15ರಂದು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ನಿಗದಿತ ಪಂದ್ಯಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡ ಕಣಕ್ಕಿಳಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಘೋಷಣೆಯ ಬೆನ್ನಲ್ಲೇ ಪ್ರಯಾಣ ಹಾಗೂ ವಸತಿ ಬುಕಿಂಗ್‌ಗಳಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, ಅಭಿಮಾನಿಗಳು ಟಿ20 ವಿಶ್ವಕಪ್‌ನ ಪ್ರಮುಖ ಪಂದ್ಯವೆಂದು ಪರಿಗಣಿಸಲ್ಪಡುವ ಭಾರತ–ಪಾಕಿಸ್ತಾನ ಮುಖಾಮುಖಿಯನ್ನು ನೇರವಾಗಿ ವೀಕ್ಷಿಸಲು ಕೊಲಂಬೊ ಕಡೆಗೆ ದೌಡಾಯಿಸಿದ್ದಾರೆ.

ಅಪಾರ ಅಭಿಮಾನಿ ಬಳಗ ಹಾಗೂ ಹೈವೋಲ್ಟೇಜ್ ಪೈಪೋಟಿಯೆಂದೇ ಹೆಸರುವಾಸಿಯಾದ ಭಾರತ–ಪಾಕಿಸ್ತಾನ ಪಂದ್ಯವು ಶ್ರೀಲಂಕಾಕ್ಕೆ ಹತ್ತಾರು ಸಾವಿರ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದ್ದು, ಮುಂದಿನ ದಿನಗಳಲ್ಲಿ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಈ ಪಂದ್ಯವು ಕ್ರಿಕೆಟ್ ಅಭಿಮಾನಿಗಳಲ್ಲಿ ಉನ್ಮಾದದ ವಾತಾವರಣವನ್ನು ನಿರ್ಮಿಸಿದೆ.

LEAVE A REPLY

Please enter your comment!
Please enter your name here