
ಬೆಂಗಳೂರು, ಜ.30: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಪತ್ತೆಹಚ್ಚಿ ಗಡೀಪಾರು ಮಾಡಲು ವಿಶೇಷ ತಂಡ ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.
ವಿಧಾನಸಭೆಯಲ್ಲಿ ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರ ಕುರಿತು ಮಾಹಿತಿ ನೀಡಿದ ಹಿಂದೂ ಪರ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ಗಮನ ಸೆಳೆದ ಸೂಚನೆ ಮಂಡಿಸಿದರು. ಇದಕ್ಕೆ ಗೃಹ ಸಚಿವರ ಪರವಾಗಿ ಸಾರಿಗೆ ಹಾಗೂ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಉತ್ತರಿಸಿದರು.
ಅಕ್ರಮ ವಲಸಿಗರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ ಹಿಂದೂ ಪರ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಒಟ್ಟು 370 ಅಕ್ರಮ ವಲಸಿಗರು ಪತ್ತೆಯಾಗಿದ್ದು, ಅವರಲ್ಲಿ 213 ಮಂದಿಯನ್ನು ಈಗಾಗಲೇ ಗಡೀಪಾರು ಮಾಡಲಾಗಿದೆ. ಉಳಿದ 157 ಮಂದಿಯ ವಿರುದ್ಧ ಅಕ್ರಮ ವಲಸಿಗರ ಬಂಧನ ಕೇಂದ್ರ (ಎಫ್‌ಡಿಸಿ)ಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ, ಅವರನ್ನು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಚರ್ಚೆಯ ವೇಳೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದು, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಫಿ ತೋಟಗಳು, ಶಾಪಿಂಗ್ ಮಾಲ್‌ಗಳು ಹಾಗೂ ಐಟಿ–ಬಿಟಿ ಕಂಪನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ನಕಲಿ ಆಧಾರ್ ಹಾಗೂ ರೇಷನ್ ಕಾರ್ಡ್‌ಗಳನ್ನು ಪಡೆದುಕೊಂಡಿರುವ ಇದು ದೊಡ್ಡ ಜಾಲವಾಗಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ಭಯಾನಕ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರಿನ ಜನಸಂಖ್ಯೆಯೇ ಸುಮಾರು 1.40 ಕೋಟಿ ಇದೆ. ರಾಜ್ಯದಲ್ಲಿ 25 ಲಕ್ಷ ಬಾಂಗ್ಲಾದೇಶಿಯರು ಇದ್ದಾರೆ ಎನ್ನುವುದು ಅತಿರೇಕದ ಹೇಳಿಕೆ ಎಂದು ಹೇಳಿದರು. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಜನ ರಾಜ್ಯದಲ್ಲಿ ನೆಲೆಸಿದ್ದಾರೆ. ಈ ಹಿಂದೆಯೂ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧೆಡೆ ಕಾಫಿ ಎಸ್ಟೇಟ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.
ಅಕ್ರಮ ವಲಸಿಗರು ಎಲ್ಲಿಯೇ ಇದ್ದರೂ ಅವರನ್ನು ಪತ್ತೆಹಚ್ಚಿ ಹೊರಗೆ ಹಾಕಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಬಾಂಗ್ಲಾದೇಶಿಯರು ರಾಜ್ಯಕ್ಕೆ ನೇರವಾಗಿ ಬರುವುದಿಲ್ಲ, ಬಾಂಗ್ಲಾದೇಶ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳ ಮೂಲಕವೇ ಅವರು ಪ್ರವೇಶಿಸುತ್ತಾರೆ. ಅಕ್ರಮ ವಲಸೆ ತಡೆಯುವಲ್ಲಿ ಇದು ರಾಜ್ಯ ಸರ್ಕಾರದ ವೈಫಲ್ಯವಲ್ಲ, ದೇಶದ ಗಡಿಯನ್ನು ರಕ್ಷಿಸಲು ವಿಫಲವಾದ ಕೇಂದ್ರ ಸರ್ಕಾರದ ವೈಫಲ್ಯ ಎಂದು ಅವರು ಹೇಳಿದರು.
ಅಕ್ರಮ ವಲಸಿಗರ ಕುರಿತು ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಬೇಕು ಹಾಗೂ ಅವರಿಗೆ ಯಾವುದೇ ತೊಂದರೆ ಕೊಡಬಾರದು ಎಂಬ ಯತ್ನಾಳ್ ಅವರ ಮನವಿಗೆ ಸ್ಪಂದಿಸಿದ ಸಚಿವರು, ಅಕ್ರಮ ವಲಸಿಗರಷ್ಟೇ ಅಲ್ಲದೆ ಅವರನ್ನು ದೇಶದೊಳಗೆ ಕರೆತರುವವರು, ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀಡುವ ದಲ್ಲಾಳಿಗಳನ್ನೂ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು. ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡುವವರನ್ನು ಸರ್ಕಾರ ರಕ್ಷಿಸುತ್ತದೆ. ಆದರೆ, ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದರು.





