ಚಳಿಯಿಂದ ತತ್ತರಿಸಿದ ಕಾಶ್ಮೀರ: ಗುಲ್ಮಾರ್ಗ್‌ನಲ್ಲಿ ಮೈನಸ್ 8.8 ಡಿಗ್ರಿ ಸೆಲ್ಸಿಯಸ್ ದಾಖಲು!

0
23
Advertisement

ಗುಲ್ಮಾರ್ಗ್, ಜ.05: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಗುಲ್ಮಾರ್ಗ್ ಕೊರೆಯುವ ಚಳಿಯಿಂದ ತತ್ತರಿಸಿದ್ದು, ಕನಿಷ್ಠ ತಾಪಮಾನ ಮೈನಸ್ 8.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಜನಪ್ರಿಯ ಸ್ಕೀ ರೆಸಾರ್ಟ್ ಆಗಿರುವ ಗುಲ್ಮಾರ್ಗ್‌ನಲ್ಲಿ ಭಾನುವಾರ ಮತ್ತೆ ಹಿಮಪಾತ ಸಂಭವಿಸಿದ್ದು, ಈ ಚಳಿಗಾಲದಲ್ಲಿ ಅತ್ಯಂತ ಹೆಚ್ಚು ಶೀತ ರಾತ್ರಿಯನ್ನು ದಾಖಲಿಸಿದೆ. ಕಳೆದ ಎರಡು ರಾತ್ರಿಗಳಲ್ಲಿಯೂ ಗುಲ್ಮಾರ್ಗ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 6.5 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿದಿದೆ.

ಕಾಶ್ಮೀರ ಕಣಿವೆಯ ರಾಜಧಾನಿ ಶ್ರೀನಗರದಲ್ಲಿಯೂ ಚಳಿ ತೀವ್ರಗೊಂಡಿದ್ದು, ಶನಿವಾರ ರಾತ್ರಿ ಮೈನಸ್ 3.2 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ತಾಪಮಾನ, ಭಾನುವಾರ ರಾತ್ರಿ ಮೈನಸ್ 3.6 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ. ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಮೈನಸ್ 4.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಇನ್ನು ಕಣಿವೆಯ ಹೆಬ್ಬಾಗಿಲು ಪಟ್ಟಣ ಖಾಜಿಗುಂಡ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 2.0 ಡಿಗ್ರಿ ಸೆಲ್ಸಿಯಸ್, ಕೊಕರ್ನಾಗ್‌ನಲ್ಲಿ ಮೈನಸ್ 1.2 ಡಿಗ್ರಿ ಸೆಲ್ಸಿಯಸ್ ಹಾಗೂ ಉತ್ತರ ಕಾಶ್ಮೀರದ ಕುಪ್ವಾರಾದಲ್ಲಿ ಮೈನಸ್ 1.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪ್ರಸ್ತುತ ಕಾಶ್ಮೀರ ಕಣಿವೆ ‘ಚಿಲ್ಲಾ-ಎ-ಕಲನ್’ ಅವಧಿಯ ಮಧ್ಯದಲ್ಲಿದ್ದು, ಇದು 40 ದಿನಗಳ ತೀವ್ರ ಚಳಿಗಾಲದ ಹಂತವಾಗಿದೆ. ಈ ಅವಧಿಯಲ್ಲಿ ರಾತ್ರಿಯ ತಾಪಮಾನ ಸಾಮಾನ್ಯವಾಗಿ ಹಿಮಾಂಶಕ್ಕಿಂತ ಹಲವಾರು ಡಿಗ್ರಿಗಳಷ್ಟು ಕಡಿಮೆಯಾಗಿರುತ್ತದೆ. ಪರಿಣಾಮವಾಗಿ ಹಿಮಪಾತದ ಸಾಧ್ಯತೆಗಳು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಯೂ ತೀವ್ರ ಚಳಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

LEAVE A REPLY

Please enter your comment!
Please enter your name here