ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಬಿಜ್ಜವರ ಎಚ್. ಲೋಕೇಶ್ ಅವರಿಗೆ ‘ಹಂಸ ಸಮ್ಮಾನ್–2026’ ಪ್ರಶಸ್ತಿ ಪ್ರದಾನ

0
5
Advertisement

ಬೆಂಗಳೂರು, ಮಾ.16: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಂಸಜ್ಯೋತಿ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಹಂಸ ಸಮ್ಮಾನ್–2026’ ಪ್ರಶಸ್ತಿಯನ್ನು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಬಿಜ್ಜವರ ಎಚ್. ಲೋಕೇಶ್ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯದ ಮಾಜಿ ಲೋಕಾಯುಕ್ತರಾದ ನ್ಯಾ. ಸಂತೋಷ್ ಹೆಗ್ಡೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಸೇರಿದಂತೆ ವಿವಿಧ ಗಣ್ಯರು ಬಿಜ್ಜವರ ಎಚ್. ಲೋಕೇಶ್ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಲೋಕೇಶ್ ಅವರ ಸಮಾಜಮುಖಿ ಸಾಧನೆಯನ್ನು ಸ್ಮರಿಸಲಾಯಿತು. ರೈತರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಲೋಕೇಶ್ ಅವರ ಕಾರ್ಯವನ್ನು ಶ್ಲಾಘಿಸಿ, ನೀರಿನ ಅಭಾವದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಕೆರೆ–ನದಿಗಳಂತಹ ನೀರಿನ ಮೂಲಗಳ ಉಳಿವಿಗಾಗಿ, ವಿಶೇಷವಾಗಿ ದಕ್ಷಿಣ ಪಿನಾಕಿನಿ ನದಿ ಸಂರಕ್ಷಣೆಗೆ ಅವರು ಕೈಗೊಂಡಿರುವ ಪ್ರಯತ್ನಗಳು ಗಮನಾರ್ಹವೆಂದು ವೇದಿಕೆಯಲ್ಲಿ ಪ್ರಶಂಸಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ‘ಹಂಸ ಸಾಂಸ್ಕೃತಿಕ ಸಂಭ್ರಮ’ ಅಂಗವಾಗಿ ಹಳೆಯ ಕನ್ನಡ ಚಲನಚಿತ್ರ ಗೀತೆಗಳ ರಸಮಂಜರಿ ನಡೆಯಿತು. ಜೊತೆಗೆ ಸಾಮೂಹಿಕ ಶಾಸ್ತ್ರೀಯ ನೃತ್ಯಗಳಲ್ಲಿ ಭರತನಾಟ್ಯ ಹಾಗೂ ಕರಗ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿತು.

ಸಾಂಸ್ಕೃತಿಕ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಹಂಸಜ್ಯೋತಿ ಟ್ರಸ್ಟ್ ತನ್ನ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here