
ನವದೆಹಲಿ, ಫೆ.23: ಮುಂಬರುವ ದಿನಗಳಲ್ಲಿ ಅಮೆರಿಕ ವೈಮಾನಿಕ ದಾಳಿ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇರಾನ್ ನಲ್ಲಿ ಇರುವ ಭಾರತೀಯ ನಾಗರಿಕರು ತಕ್ಷಣವೇ ದೇಶ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವುದೇ ವಿಮಾನ ವ್ಯವಸ್ಥೆಗಳ ಮೂಲಕ ಇರಾನ್‌ನಿಂದ ಸುರಕ್ಷಿತವಾಗಿ ಹೊರಹೋಗುವಂತೆ ರಾಯಭಾರ ಕಚೇರಿ ಮನವಿ ಮಾಡಿದೆ.
ಈ ಸೂಚನೆ ಇರಾನ್‌ನಲ್ಲಿರುವ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲಾ ಭಾರತೀಯರಿಗೆ ಅನ್ವಯವಾಗಲಿದೆ. ಜನವರಿ 14, 2026ರಂದು ಹೊರಡಿಸಿದ ಸಲಹೆಯನ್ನು ಎಲ್ಲಾ ಭಾರತೀಯ ನಾಗರಿಕರು ಹಾಗೂ ಭಾರತೀಯ ಮೂಲದ ವ್ಯಕ್ತಿಗಳು (PIOs) ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.
ಪ್ರತಿಭಟನೆಗಳು ಅಥವಾ ಪ್ರದರ್ಶನಗಳು ನಡೆಯುವ ಪ್ರದೇಶಗಳಿಗೆ ತೆರಳಬಾರದು, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಯಾವುದೇ ಬೆಳವಣಿಗೆಗಳ ಕುರಿತು ಸ್ಥಳೀಯ ಮಾಧ್ಯಮಗಳನ್ನು ನಿಗಾ ವಹಿಸಬೇಕು ಎಂದು ಸಲಹೆಯಲ್ಲಿ ಪುನರುಚ್ಚರಿಸಲಾಗಿದೆ.
ಇದೇ ವೇಳೆ, ಇರಾನ್‌ನಲ್ಲಿರುವ ಭಾರತೀಯರು ತಮ್ಮ ಪಾಸ್‌ಪೋರ್ಟ್‌ಗಳು, ಗುರುತಿನ ಚೀಟಿಗಳು ಸೇರಿದಂತೆ ಪ್ರಯಾಣ ಹಾಗೂ ವಲಸೆ ಸಂಬಂಧಿತ ದಾಖಲೆಗಳನ್ನು ಸದಾ ತಮ್ಮಲ್ಲೇ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಅಥವಾ ನೆರವಿನ ಅಗತ್ಯವಿದ್ದಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ತುರ್ತು ಸಹಾಯಕ್ಕಾಗಿ ಭಾರತೀಯ ರಾಯಭಾರ ಕಚೇರಿ ನೀಡಿರುವ ಸಂಪರ್ಕ ವಿವರಗಳು:
+989128109115, +989128109109, +989128109102, +989932179359.





