ಯೋಗ್ಯತಾ ಪರವಾನಗಿ ಇಲ್ಲದೆ ವಿಮಾನ ಹಾರಾಟ: ಏರ್ ಇಂಡಿಯಾಗೆ ₹1 ಕೋಟಿ ದಂಡ!

0
7
Advertisement

ನವದೆಹಲಿ, ಫೆ.14: ವಿಮಾನಯಾನ ಯೋಗ್ಯತಾ ಪರವಾನಗಿ ಇಲ್ಲದೆ ಕಳೆದ ವರ್ಷ ಎಂಟು ಬಾರಿ ಏರ್‌ಬಸ್ A320 ನಿಯೋ ವಿಮಾನವನ್ನು ಹಾರಾಟಕ್ಕೆ ಬಳಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸುಮಾರು 110,350 ಅಮೆರಿಕನ್ ಡಾಲರ್‌ಗಳು (ಅಂದಾಜು ₹1 ಕೋಟಿ) ದಂಡ ವಿಧಿಸಿದೆ.

ಕಳೆದ ವರ್ಷದ ಡಿಸೆಂಬರ್ 2ರಂದು ಕನಿಷ್ಠ ಎಂಟು ಮಾರ್ಗಗಳಲ್ಲಿ ಅಗತ್ಯವಿದ್ದ ಯೋಗ್ಯತಾ ಪರವಾನಗಿ ಇಲ್ಲದೆ A320 ನಿಯೋ ವಿಮಾನವನ್ನು ಚಲಾಯಿಸಿದ್ದ ಬಗ್ಗೆ ಡಿಜಿಸಿಎ ತನಿಖೆ ನಡೆಸಿತ್ತು. ನಿಯಮ ಉಲ್ಲಂಘನೆ ದೃಢಪಟ್ಟ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, 2025ರಲ್ಲಿ ಸ್ವಯಂ ಪ್ರೇರಣೆಯಿಂದ ವರದಿಯಾದ ಘಟನೆಗೆ ಸಂಬಂಧಿಸಿದ ಡಿಜಿಸಿಎ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ. ವಿಮಾನಕ್ಕೆ ಸಂಬಂಧಿಸಿದ ಎಲ್ಲಾ ಅಂತರಗಳನ್ನು ತೃಪ್ತಿಕರವಾಗಿ ಪರಿಹರಿಸಿ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಕಾರ್ಯಾಚರಣೆಯ ಸಮಗ್ರತೆ ಹಾಗೂ ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವ ಬದ್ಧತೆಯಲ್ಲಿ ಸಂಸ್ಥೆ ಅಚಲವಾಗಿದೆ ಎಂದು ಹೇಳಿದೆ.

ಎಂಟು ಮಾರ್ಗಗಳಲ್ಲಿ ARC ಇಲ್ಲದೆ A320 ವಿಮಾನದ ಹಾರಾಟ ನಡೆದ ಬಗ್ಗೆ ನವೆಂಬರ್ 26, 2025ರಂದು ಏರ್‌ಲೈನ್ ಡಿಜಿಸಿಎಗೆ ಮಾಹಿತಿ ನೀಡಿತ್ತು. ಸಾಮಾನ್ಯವಾಗಿ ವಿಮಾನಕ್ಕೆ ಸಂಬಂಧಿಸಿದ ನಿರ್ವಹಣಾ ದಾಖಲೆಗಳು, ಭೌತಿಕ ಸ್ಥಿತಿ ಹಾಗೂ ಎಲ್ಲಾ ಯೋಗ್ಯತಾ ಮಾನದಂಡಗಳ ಸಮಗ್ರ ಪರಿಶೀಲನೆಯ ನಂತರವೇ ಪರವಾನಗಿ ನೀಡಲಾಗುತ್ತದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, ಈ ಹಿಂದೆ ಸಹ ಹಲವು ಬಾರಿ ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಡಿಜಿಸಿಎ ಕ್ರಮಗಳನ್ನು ಎದುರಿಸಿರುವುದು ಗಮನಾರ್ಹ.

Advertisement

LEAVE A REPLY

Please enter your comment!
Please enter your name here