ಬೆಂಗಳೂರಲ್ಲಿ ಮುಂದುವರಿದ ಶೀತಗಾಳಿ; ಮದ್ರಾಸ್ ಐ ಹೆಚ್ಚುವ ಭೀತಿ!

0
25
Advertisement

ಬೆಂಗಳೂರು, ಜ.04: ಬೆಂಗಳೂರಿನಲ್ಲಿ ಈ ವರ್ಷ ಚಳಿಗಾಲದೊಂದಿಗೆ ಕಳೆದ ಕೆಲ ದಿನಗಳಿಂದ ಶೀತಗಾಳಿ ತೀವ್ರಗೊಂಡಿದ್ದು, ವಾತಾವರಣದಲ್ಲಿನ ತೇವಾಂಶ ಹೆಚ್ಚಳದ ಪರಿಣಾಮವಾಗಿ ಮದ್ರಾಸ್‌ ಐ (ಕಣ್ಣಿನ ಸೋಂಕು) ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಈ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮಕ್ಕಳೇ ಎಚ್ಚರ!

ನಗರದಲ್ಲಿ ಬದಲಾಗುತ್ತಿರುವ ಹವಾಮಾನ, ಹೆಚ್ಚಿದ ಚಳಿ ಹಾಗೂ ತೇವಾಂಶದ ವಾತಾವರಣದಿಂದಾಗಿ ಮದ್ರಾಸ್‌ ಐ ಸೋಂಕು ವೇಗವಾಗಿ ಹರಡುತ್ತಿದೆ. ಮಕ್ಕಳಲ್ಲಿ ಕಣ್ಣಿನ ಕೆಂಪು, ಉರಿ, ನೀರು ಸುರಿಯುವುದು ಸೇರಿದಂತೆ ವಿವಿಧ ಲಕ್ಷಣಗಳು ಕಂಡುಬರುತ್ತಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ತ್ವರಿತವಾಗಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದೆಂದು ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ. ಸೋಂಕು ಕಾಣಿಸಿಕೊಂಡ ಮಕ್ಕಳನ್ನು ಶಾಲೆಗೆ ಕಳುಹಿಸದೇ, ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ.

ಇದೇ ವೇಳೆ ಆರೋಗ್ಯ ಇಲಾಖೆಯೂ ಮದ್ರಾಸ್‌ ಐ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆಗಳನ್ನು ಪ್ರಕಟಿಸಿದೆ. ಶೀತಗಾಳಿಯಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಚಳಿಯ ಪರಿಣಾಮವಾಗಿ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಮಕ್ಕಳಲ್ಲಿ ಕಣ್ಣಿನ ಸೋಂಕಿನ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿದ್ದು, ಸ್ವಚ್ಛತೆ ಪಾಲನೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳಿಂದ ಸೋಂಕು ಹರಡುವುದನ್ನು ತಡೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here