ಮನುಜಮತ ಚಿಂತನೆ ಕುವೆಂಪು ಸಾಹಿತ್ಯದ ಮೂಲ: ಶ್ರೀ. ಸಿದ್ದಲಿಂಗಯ್ಯ ಸ್ವಾಮಿ

0
2
Advertisement

ಸಿರುಗುಪ್ಪ,ಫೆ.10: ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಿರುಗುಪ್ಪ ಘಟಕದ ವತಿಯಿಂದ ಸಿರುಗುಪ್ಪದ ಎಸ್.ಇ.ಎಸ್. ಡಿ.ಎಡ್. ಕಾಲೇಜಿನಲ್ಲಿ ದಿನಾಂಕ 10-2-26 ರಂದು ಶಾಂತಾಬಾಯಿ ಹಾಗೂ ಷಣ್ಮುಖಪ್ಪ ಬಳಿಗಾರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ʼರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆʼ ವಿಷಯದ ಕುರಿತು ಶ್ರೀ ಸಿದ್ದಲಿಂಗಯ್ಯ ಸ್ವಾಮಿ ಉಪನ್ಯಾಸ ನೀಡಿ, ಕುವೆಂಪು ಅವರ ವೈಚಾರಿಕ ನಿಲುವು ನೇರ, ಖಚಿತ ಹಾಗೂ ಪೂರ್ಣದೃಷ್ಟಿ ಸಮನ್ವಿತವಾಗಿದ್ದು ವೈಜ್ಞಾನಿಕ ಚಿಂತನೆಯಿಂದ ಪ್ರೇರಿತವಾಗಿದೆ ಹಾಗೆಯೇ ಉಪನಿಷತ್ತುಗಳ ಆಧ್ಯಾತ್ಮಿಕ ದರ್ಶನವನ್ನು ನಿರಾಕರಿಸದೆ ಮನುಜಮತವನ್ನು ಅವರು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷರಾದ ಡಾ. ಮಧುಸೂದನ ಕಾರಿಗನೂರು, ಮನುಜಮತ, ವಿಶ್ವಪಥ, ಸರ್ವೋದಯ, ಪೂರ್ಣದೃಷ್ಟಿ ಹಾಗೂ ಸಮನ್ವಯತೆ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ ದರ್ಶನಗಳಾಗಿವೆ ಎಂದರು. ಈ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯುವ ಮೂಲಕ ಕನ್ನಡ ಸಾಹಿತ್ಯ ಇನ್ನಷ್ಟು ಮಹತ್ವದ ಕೊಡುಗೆ ನೀಡಲು ಸಾಧ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಎಸ್.ಇ.ಎಸ್. ಡಿ.ಎಡ್. ಕಾಲೇಜಿನ ಪ್ರಾಚಾರ್ಯರಾದ ಮಹಮ್ಮದ್ ಫಯಾಜ್, ಕುವೆಂಪು ಅವರು ತಮ್ಮ ವೈಚಾರಿಕ ಅಭಿವ್ಯಕ್ತಿಯಲ್ಲಿ ಹಳೆಯ ಸಂಸ್ಕೃತಿ–ಸಂಪ್ರದಾಯಗಳನ್ನು ಸಂಪೂರ್ಣವಾಗಿ ತಿರಸ್ಕರಿಸದೆ ಅವುಗಳ ಮೂಲಭೂತ ಮೌಲ್ಯಗಳನ್ನು ಹೊಸ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕರಾದ ಶಿವಕುಮಾರ್ ಎಸ್. ಬಳಿಗಾರ್ ಮಾತನಾಡಿ, ವಿಶ್ವಪ್ರಜ್ಞೆ ಎಂಬುದು ತನ್ನ ಸುತ್ತಮುತ್ತಲವರಿಂದ ಆರಂಭವಾಗಿ ಕ್ರಮೇಣ ಸಂಪೂರ್ಣ ವಿಶ್ವವನ್ನು ವ್ಯಾಪಿಸಬೇಕು. ತನ್ನ ಪರಿಸರದ ಕ್ಷೇಮಕ್ಕಾಗಿ ದುಡಿಯದೆ ಯಾವುದೇ ವ್ಯಕ್ತಿ ವಿಶ್ವಪ್ರಜ್ಞೆಯನ್ನು ಸಾಧಿಸಲಾರನು; ಇದು ಕುವೆಂಪು ಅವರ ಚಿಂತನೆಯ ಮೂಲಭೂತ ನಿಲುವಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಕಾಂತ್, ಭೀಮ ಲಿಂಗಪ್ಪ, ವೆಂಕಟೇಶ್ ಉಪಸ್ಥಿತರಿದ್ದು ಇದೇ ಸಂದರ್ಭದಲ್ಲಿ ಡಿ.ಎಡ್. ವಿದ್ಯಾರ್ಥಿಗಳಿಂದ ಕುವೆಂಪು ವಿರಚಿತ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Advertisement

LEAVE A REPLY

Please enter your comment!
Please enter your name here