ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ವಿವಾದದ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್‌ಗಾಗಿ ತಮ್ಮ ನಿಷ್ಠೆಯನ್ನು ಸ್ಪಷ್ಟಪಡಿಸಿದರು. ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು ತಮ್ಮ ರಾಜಕೀಯ ಪಯಣ ಮತ್ತು ಪಕ್ಷಗಳ ಕುರಿತ ತಿಳುವಳಿಕೆಯನ್ನು ಹಂಚಿಕೊಂಡು ಕೊನೆಯಲ್ಲಿ ಕ್ಷಮೆಯನ್ನೂ ಯಾಚಿಸಿದರು.
ಬೆಂಗಳೂರು, ಆಗಸ್ಟ್ 26: “ನಾನು ಹುಟ್ಟಿದ್ದು ಕಾಂಗ್ರೆಸ್ಸಿಗನಾಗಿ, ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ ನೀಡಿದರು. ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಬಗ್ಗೆ ಹಲವು ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರೆ, ಬಿಕೆ ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಈ ಪೈಕಿ ನಡೆದ ಬೆಳವಣಿಗೆಗಳ ನಂತರ, ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಕೆಶಿ, “ವಿರೋಧ ಪಕ್ಷದ ಸಿದ್ಧಾಂತ ಅರಿವಿದೆ ಎಂದು ಕಾಲೆಳೆದಿದ್ದೇನೆ, ಅದರ ಹೊರತಾಗಿ ಇನ್ನೇನೂ ಇಲ್ಲ” ಎಂದರು.
ವಿಧಾನಸಭೆಯಲ್ಲಿ ಸದಾ ಆಚಾರ ವಿಚಾರಗಳನ್ನು ಪಾಲಿಸುತ್ತಾ ಬಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿಯೇ ನನ್ನ ಗುರುತು ಆರಂಭವಾಗಿದೆ. ನಾನು ಹೊಸದಾಗಿ ಕಾಂಗ್ರೆಸ್ ಸೇರಿಲ್ಲ, ಯಾರ ಪಾಠವೂ ನನಗೆ ಅಗತ್ಯವಿಲ್ಲ. ಗಾಂಧಿ ಕುಟುಂಬದೊಂದಿಗೆ ನನಗೆ ಭಕ್ತ–ಭಗವಂತನಂತಿರುವ ಸಂಬಂಧವಿದೆ. ನಾನು ಎಂಎ ಪೊಲೀಟಿಕಲ್ ವಿದ್ಯಾರ್ಥಿ, ರಾಜಕೀಯಕ್ಕೆ ಬರೋದಕ್ಕೂ ಮುನ್ನ ಎಲ್ಲ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯೂನಿಸಂ, ಬಿಜೆಪಿ, ಆರ್‌ಎಸ್‌ಎಸ್, ದಳಗಳ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಸಮಾವೇಶದಲ್ಲೂ ಭಾಗವಹಿಸಿದ್ದೇನೆ, ಅವರ ಶಿಸ್ತಿಗೆ ನಾನು ಬೆರಗಾಗಿದ್ದೆ. ಅಗತ್ಯವಿದ್ದರೆ ಬಿಕೆ ಹರಿಪ್ರಸಾದ್‌ಗೂ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಮತ್ತಷ್ಟು ಓದಿ: ಕಾಲ್ ಸೆಂಟರ್ ಮೂಲಕ ಅಮೆರಿಕ ಪ್ರಜೆಗಳಿಂದ 350 ಕೋಟಿ ರೂ. ವಂಚನೆ ಸಿಬಿಐ ಮೂರು ಮಂದಿಯನ್ನು ಬಂಧಿಸಿದೆ
ಅವರು ಮುಂದುವರೆದು, “ನಾನು ಕಾಂಗ್ರೆಸ್ಸಿಗ, ಆದರೆ ನನ್ನ ಧರ್ಮವನ್ನೂ ಬಿಡುವುದಿಲ್ಲ. ಜೊತೆಗೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಇತರ ಧರ್ಮಗಳಿಗೂ ಗೌರವವಿದೆ. ಎಲ್ಲಕ್ಕಿಂತ ಹೆಚ್ಚಿನ ನಂಬಿಕೆ ನನಗೆ ಮಾನವ ಧರ್ಮದ ಮೇಲೆ” ಎಂದರು.
“ಯಾರಿಗಾದರೂ ನನ್ನಿಂದ ನೋವಾಗಿದ್ದರೆ ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ. ಆದರೆ ಒಂದು ವಿಷಯ ಸ್ಪಷ್ಟ ಯಾರೂ ನನ್ನನ್ನು ಪ್ರಶ್ನಿಸಿಲ್ಲ, ಹೈಕಮಾಂಡ್ ಕೂಡ ಕೇಳಿಲ್ಲ. ಆದ್ದರಿಂದ ಈ ವಿಚಾರ ಇಲ್ಲಿಗೇ ಮುಗಿಯಲಿ. ನನ್ನ ಮತ್ತು ಕಾಂಗ್ರೆಸ್ ಸಂಬಂಧವು ಭಕ್ತ ಮತ್ತು ಭಗವಂತನ ಸಂಬಂಧದಂತಿದೆ” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
