

ಬಳ್ಳಾರಿ, ಸೆ.02: ನಾನು ಶಾಸಕನಾಗಬೇಕೆಂದು ಬಹಳ ಜನರ ಬಯಕೆಯಾಗಿತ್ತು, ನನ್ನ ಗೆಲುವಿಗಾಗಿ ಶ್ರಮಿಸಿದ ಮುಖಂಡರ ಮತ್ತು ಬಳ್ಳಾರಿಯ ಜನರ ಋಣ ನನ್ನ ಮೇಲಿದೆ, ಅವರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಮಂಗಳವಾರ ಮಧ್ಯಾಹ್ನ 17ನೇ ವಾರ್ಡಿನ ಹನುಮಾನ್ ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ, ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಅರ್ಹ ಹುದ್ದೆ ನೀಡುವುದು ನಮ್ಮ ಜವಾಬ್ದಾರಿ, ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವ ವೈರಿಗೂ ಸ್ವಾಗತ ಮಾಡುವುದು ನಮ್ಮ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿರುವಂತೆ ಯಾರೇ ಬಂದರೂ ಪಕ್ಷಕ್ಕೆ ಸ್ವಾಗತ ಎಂದರು.
ಇಂದು ಪಕ್ಷ ಸೇರ್ಪಡೆ ಆಗಿರುವ ಹೊನ್ನೂರಪ್ಪ ಮತ್ತು ಅವರ ಪುತ್ರರು ಹಾಗೂ ಇತರ ಬೆಂಬಲಿಗರು ಮೊದಲು ಕಾಂಗ್ರೆಸ್ ಪಕ್ಷದಲ್ಲೇ ಇದ್ದರು, ಕಾರಣಾಂತರಗಳಿಂದ ಬೇರೆ ಪಕ್ಷಕ್ಕೆ ಹೋಗಿ ಮರಳಿ ಬಂದಿದ್ದಾರೆ, ಅವರ ಕುಟುಂಬಕ್ಕೆ ಅವರು ಮರಳಿದ್ದಾರೆ ಎಂದು ಹೇಳಿದ ಶಾಸಕ ಭರತ್ ರೆಡ್ಡಿ, ನೀವು ನನ್ನ ಮೇಲಿಟ್ಟಿರುವ ಭರವಸೆಗೆ ತಕ್ಕಂತೆ ನಿಮ್ಮೊಂದಿಗೆ ನಡೆದುಕೊಳ್ಳುವೆ, ಪಕ್ಷ ನಿಮಗೆ ಒಳ್ಳೆಯ ಅವಕಾಶ ನೀಡಲಿದೆ ಎಂದರು.

ಜನರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭರವಸೆಗೆ ತಕ್ಕಂತೆ ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, 1200 ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದೆ, ಪ್ರಾಥಮಿಕ ಹಂತದಲ್ಲಿ 260 ಕೋಟಿ ರೂ.ಗಳ ಟೆಂಡರ್ ಆಗಿದ್ದು, ಸರ್ವೆ ಕಾರ್ಯ, ಪೈಪಲೈನ್ – ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಾಯೋಗಿಕವಾಗಿ ಆರಂಭವಾಗಿದೆ, ರಸ್ತೆ ಹಾಗೂ ವೃತ್ತಗಳ ಅಭಿವೃದ್ಧಿ, ನಗರ ಸುಂದರೀಕರಣ, ಮಂದಿರ-ಮಸೀದಿ-ದರ್ಗಾ-ಚರ್ಚ್ ಗಳ ಅಭಿವೃದ್ಧಿಗೂ ಅನುದಾನ ನೀಡಿರುವೆ ಎಂದರು.
ಇದಕ್ಕೂ ಮುನ್ನ ಸಲಾಂ ಬಳ್ಳಾರಿ ಅಭಿಯಾನದ ಭಾಗವಾಗಿ ವಾರ್ಡಿನಾದ್ಯಂತ ಸಂಚರಿಸಿ, ಜನರಿಂದ ಅಹವಾಲು ಸ್ವೀಕರಿಸಿದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ಡಿಸಿಸಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸೇರ್ಪಡೆಯಾದವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ಮಾಜಿ ಮೇಯರ್ ರಾಜೇಶ್ವರಿ, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ರಾಮಾಂಜನೇಯ, ಜಬ್ಬಾರ್, ಶಿವರಾಜ್, ರಾಕಿ, ಬ್ಲಾಕ್ ಅಧ್ಯಕ್ಷ ಅಭಿಲಾಶ್, ಥಿಯೇಟರ್ ಶಿವು, ರಘು, ನಾಗರಾಜ, ಬಾಲರಾಜು ಮೊದಲಾದವರು ಹಾಜರಿದ್ದರು.
