ತಿರುಪತಿ ಲಡ್ಡುಗೆ ಕಲಬೆರಕೆ ತುಪ್ಪ ಬಳಕೆ: ಚಂದ್ರಬಾಬು ನಾಯ್ಡು ಆರೋಪ!

0
2
Advertisement

ಅಮರಾವತಿ, ಫೆ.07:ತಿರುಪತಿ ಲಡ್ಡುಗೆ ಸಿ.ಬಿ.ಐ ಕ್ಲೀನ್‌ ಚಿಟ್‌ ಕೊಟ್ಟ ಬೆನ್ನಲ್ಲೇ, ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ಲಡ್ಡು ತಯಾರಿಕೆಗೆ ಐದು ವರ್ಷಗಳ ಕಾಲ ಬಾತ್‌ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳು ಬೆರೆತಿದ್ದ ಕಲಬೆರಕೆ ತುಪ್ಪವನ್ನು ಉಪಯೋಗಿಸಲಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಪ್ರಸಾದದ ಕಲಬೆರಕೆ ವಿವಾದ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.

ಆಂಧ್ರದ ಕರ್ನೂಲು ಜಿಲ್ಲೆಯ ಕಲುಗೋಟಲ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೇ ಕಲಬೆರಕೆ ತುಪ್ಪವನ್ನು ಶ್ರೀಶೈಲಂ ದೇವಾಲಯಕ್ಕೂ ಪೂರೈಸಲಾಗುತ್ತಿತ್ತು ಎಂದು ಹೇಳಿದರು. ಅಲ್ಲದೆ, ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನೂ ಬಳಸಲಾಗಿತ್ತು ಎಂಬುದನ್ನು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ವರದಿ ಸ್ಪಷ್ಟಪಡಿಸಿದೆ ಎಂದು ನಾಯ್ಡು ತಿಳಿಸಿದರು.

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಐದು ವರ್ಷದ ಆಡಳಿತಾವಧಿಯಲ್ಲಿಯೇ ಬಾತ್‌ರೂಮ್ ಸ್ವಚ್ಛಗೊಳಿಸುವ ರಾಸಾಯನಿಕಗಳಿಂದ ತಯಾರಿಸಿದ ಕಲಬೆರಕೆ ತುಪ್ಪವನ್ನು ಲಡ್ಡು ಪ್ರಸಾದ ತಯಾರಿಕೆಗೆ ಬಳಸಲಾಗುತ್ತಿತ್ತು ಎಂಬುದು ಅತ್ಯಂತ ಖಂಡನೀಯ ವಿಷಯವಾಗಿದೆ ಎಂದು ಅವರು ಟೀಕಿಸಿದರು. ಸಸ್ಯಜನ್ಯ ರಾಸಾಯನಿಕಗಳು ದುಬಾರಿಯಾಗಿರುವುದರಿಂದ ಕಡಿಮೆ ಬೆಲೆಯ ಪ್ರಾಣಿಜನ್ಯ ಕೊಬ್ಬನ್ನು ತುಪ್ಪದಲ್ಲಿ ಬಳಸಲಾಗಿದೆ ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.

ಲಬೆರಕೆ ಲಡ್ಡು ಪ್ರಸಾದ ವಿತರಿಸುವ ಮೂಲಕ ವೆಂಕಟೇಶ್ವರ ಸ್ವಾಮಿಯ ಘನತೆ ಹಾಗೂ ದೇವಾಲಯದ ಪಾವಿತ್ರ್ಯತೆಯನ್ನು ಕುಗ್ಗಿಸಲು ಹಿಂದಿನ ಸರ್ಕಾರ ಪ್ರಯತ್ನಿಸಿದೆ ಎಂದು ನಾಯ್ಡು ಆರೋಪಿಸಿದರು. ವೆಂಕಟೇಶ್ವರ ಸ್ವಾಮಿಯ ಪಾವಿತ್ರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರದಲ್ಲಿ ಹೆಚ್ಚು ಮಾತಾಡಬಾರದು ಎಂಬ ಸಂಯಮವನ್ನೂ ಅವರು ವ್ಯಕ್ತಪಡಿಸಿದರು.

ಇನ್ನೊಂದೆಡೆ, ಪ್ರಾಣಿಜನ್ಯ ಕೊಬ್ಬಿನ ಕಲಬೆರಕೆ ನಡೆದಿಲ್ಲ ಎಂದು ಸಿಬಿಐ ನೇತೃತ್ವದ ಎಸ್‌ಐಟಿ ಕ್ಲೀನ್ ಚಿಟ್ ನೀಡಿದೆ ಎಂದು ವೈಎಸ್‌ಆರ್‌ಸಿಪಿ ನಾಯಕರು ವಾದಿಸಿದ್ದಾರೆ. ಆದರೆ ಕಲಬೆರಕೆ ನಡೆದಿದೆ ಎಂದು ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ವಿ. ಸುಬ್ಬಾರೆಡ್ಡಿ ಹೇಳಿಕೆ ನೀಡಿರುವುದಾಗಿ ಟಿಡಿಪಿ ವಲಯಗಳು ಉಲ್ಲೇಖಿಸುತ್ತಿವೆ.

ಕಲಬೆರಕೆ ತುಪ್ಪ ಬಳಸಿ ತಯಾರಿಸಿದ ಪ್ರಸಾದದಿಂದ ತಿರುಪತಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ. ಇದನ್ನು ಸರಿಪಡಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ನಾಯ್ಡು ಭರವಸೆ ನೀಡಿದರು.

ಈ ನಡುವೆ, ವೈಎಸ್‌ಆರ್‌ಸಿಪಿ ಪಕ್ಷವು, ಟಿಡಿಪಿ ಮತ್ತು ಅದರ ನಾಯಕ ಸಿಎಂ ನಾಯ್ಡು ರಾಜಕೀಯ ಲಾಭಕ್ಕಾಗಿ ಕೋಮು ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದೆ.

Advertisement

LEAVE A REPLY

Please enter your comment!
Please enter your name here