
ಲೇಖನ: ಮಂಜುಳಾ ಭಟ್ ಉಡುಪಿ
ಪತ್ರಿಕೆಯಲ್ಲಿ ಬಂದ ಇಂತಹ ಸುದ್ದಿ ಓದಿ ಏಕೋ ಮನಸ್ಸಿಗೆ ಪಿಚ್ಚೆನಿಸಿತು. ಒಂದನೇ ತರಗತಿಗೆ 5.5 ವರ್ಷಕ್ಕೆ ಪ್ರವೇಶಾವಕಾಶ ಕಲ್ಪಿಸಿ ಅಂತ ಪೋಷಕರು ಸಿ.ಎಂಗೆ ಮನವಿ ಮಾಡಿದ್ದಾರೆ. ತಿಳುವಳಿಕೆ ಉಳ್ಳವರು ಅಂದಿನ ನಮ್ಮ ಬದುಕನ್ನೂ, ನಮ್ಮ ಮಕ್ಕಳ ಇಂದಿನ ಬದುಕನ್ನೂ ತೂಗಿ ನೋಡಿದಾಗ, ಮಕ್ಕಳ ಬಾಲ್ಯವನ್ನು ಕಸಿಯುತ್ತಿರುವ ಅಪರಾಧೀ ಮನೋಭಾವ ಮೂಡದೇ ಇರಲಾರದು. ಸಾಧಾರಣ ಆರು ವರ್ಷಗಳವರೆಗೂ ತಂದೆ ತಾಯಿಯ ಜೊತೆ, ಅವರೆಲ್ಲಿ ಹೋದರೂ ಹಿಂದೆ ಹೋಗುತ್ತಾ, ಬಿಸಿಲು, ಮಳೆ,ಚಳಿ ಎಂಬ ಯೋಚನೆ ಇಲ್ಲದೇ ಅಲೆದಾಡಿದರೂ, ಜ್ಞಾನ ಸಂಪಾದನೆ ವಿಷಯದಲ್ಲಿ ಹಿಂದೆ ಬೀಳದವರು ನಾವೆಲ್ಲ. ಈಗಲೂ ನಮ್ಮ ಬಾಲ್ಯ ಕಣ್ಮುಂದೆ ಬಂದರೆ ಆಹಾ! ಎನಿಸುವ ಆಹ್ಲಾದ ಭಾವ.
ಆದರೆ ನಮ್ಮ ಮಕ್ಕಳ ವಿಷಯಕ್ಕೆ ಬಂದರೆ, ಎಷ್ಟು ಬೇಗ ಶಾಲೆಗೆ ಸೇರಿಸಲು ಸಾಧ್ಯವೋ ಅಷ್ಟು ಬೇಗ ಮನೆಯಿಂದ ಹೊರಗೆ ಕಳಿಸುವ ಹಪಾಹಪಿ.
ಆ ಮಕ್ಕಳ ಜಾಗದಲ್ಲಿ ನಿಂತು ಒಂದು ಸಲವೂ ಯೋಚಿಸುವ ವ್ಯವಧಾನ ನಮಗಿಲ್ಲದೇ ಹೋದದ್ದು ವಿಪರ್ಯಾಸ. ಮೊದಲೇ ಈಗಿನ ಮಕ್ಕಳಿಗೆ ಮಣ್ಣು, ನೀರು, ಗಾಳಿಗೆ ಮೈಯ್ಯೊಡ್ಡುವ ಸ್ವಾತಂತ್ರ್ಯ ಕಸಿದಿದ್ದೇವೆ. ಅವುಗಳ ಜೊತೆಗೆ ಬಂಧು ಬಳಗದವರ ನಂಟನ್ನೂ ದೂರ ಮಾಡುತ್ತಿದ್ದೇವೆ. ಶಿಕ್ಷಣಕ್ಕೆ ಒತ್ತು ನೀಡುವ ಹುಮ್ಮಸ್ಸಿನಲ್ಲಿ, ಅವರ ಬಾಲ್ಯ ಸಹಜ ಆಟೋಟಗಳನ್ನು ನಿಯಂತ್ರಿಸುತ್ತಿದ್ದೇವೆ. ಮಗು ಹುಟ್ಟುತ್ತಲೇ, ಪ್ಲೇ ಸ್ಕೂಲ್ ಬಗ್ಗೆ ಚರ್ಚೆ ನಡೆಯುತ್ತದೆ. ಹಾಗೆಯೇ ಕಲಿಕೆಯ ಒತ್ತಡ ಹೇರತೊಡಗುತ್ತೇವೆ. ನಮ್ಮ ಈ ನಿರ್ಧಾರ ಮಕ್ಕಳ ಎಳೆಯ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಸಣ್ಣ ಯೋಚನೆಯೂ ನಮಗೆ ಬಾರದಿರುವುದು ಖೇದನೀಯ.
ಇಷ್ಟೆಲ್ಲಾ ಒತ್ತಾಯದಿಂದ ಬಾಲ್ಯದಿಂದಲೇ ಕಲಿಕೆಗೆ ದೂಡಿದರೂ, ಎಲ್ಲಾ ಮಕ್ಕಳೂ ಓದಿನಲ್ಲಿ ಮುಂದಿರಲಾರರು. ಮುಂದಿದ್ದರೂ ಪುಸ್ತಕದ ವಿಷಯ ಬಿಟ್ಟರೆ ಸಾಮಾನ್ಯ ಜ್ಞಾನದಲ್ಲಿ ಹಿಂದೆಯೇ ಇರುತ್ತಾರೆ. ಆದರೂ ಪೋಷಕರಾದ ನಮಗೆ ಒಂದು ರೀತಿಯ ಭ್ರಾಂತಿ. ಬೇಗ ಶಾಲೆಗೆ ಸೇರಿಸಿದರೆ ಒಳ್ಳೆಯದು. ಬೇಗ ಕಲಿಯಲು ಆಸಕ್ತಿ ಮೂಡಿಸಿದಂತೇ ಎಂದೆಲ್ಲಾ.
ಮಕ್ಕಳು ಮಕ್ಕಳೇ. ಮುಗ್ಧ ಮನಸ್ಸಿಗೆ ಆಡುವಾಸೆ ಸಹಜ. ಹಾಗಾಗಿ ಹೆಚ್ಚಿನ ಮಕ್ಕಳು ಓದಿನಲ್ಲಿ ಒಂದು ಹಂತದವರೆಗೆ ಮುಂದೆ ಬರಲಾರರು. ಹಾಗೆಯೇ ಕೆಲವು ಮಕ್ಕಳು ಪಾಲಕರ ಮೇಲಿನ ಭಯದಿಂದ ಚಿಕ್ಕವರಿರುವಾಗ ಓದಿದರೂ, ನಂತರದಲ್ಲಿ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.
ನಾಯಿಕೊಡೆಗಳಂತೆ ಎಲ್ಲೆಡೆ ಪ್ಲೇ ಸ್ಕೂಲ್ ಗಳು ತಲೆ ಎತ್ತುತ್ತಿವೆ. ಇವು ಮಕ್ಕಳ ಮಾನಸಿಕ ಸ್ಥಿತಿ ಗಮನಿಸುವುದಕ್ಕಿಂತ , ತಮ್ಮ ಆರ್ಥಿಕ ಅಭಿವೃದ್ಧಿ ನೋಡುತ್ತಿರುವುದು ಸುಳ್ಳಲ್ಲ. ಹೆತ್ತವರಾದ ನಾವು, ನಮಗೆ ಸ್ವಾತಂತ್ರ್ಯ ಬೇಕು ಎನ್ನುವ ಹುಚ್ಚು ಆಲೋಚನೆಯಲ್ಲಿ ಮಕ್ಕಳನ್ನು ಇಂತಹಾ ಕಡೆ ಸೇರಿಸಿ ಬಿಡುತ್ತೇವೆ. ಅವರ ಸೊಗಸಾದ ಬಾಲ್ಯ ನಾಲ್ಕು ಗೋಡೆಗಳ ಮಧ್ಯೆ ಕಳೆದುಹೋಗುತ್ತದೆ. ಹೆಚ್ಚಿನ ಹಣ ಸಂಪಾದಿಸುವ ಹಂಬಲ ಕೂಡಾ ಮಕ್ಕಳನ್ನು ಬೇಗ ಶಾಲೆಗೆ ಸೇರಿಸುವುದಕ್ಕೆ ಕಾರಣ. ಇದರಿಂದ ನೆಮ್ಮದಿ ಸಿಗುತ್ತದೆ ಎಂದು ಭ್ರಮಿಸಿದರೆ ನಮ್ಮಷ್ಟು ಮೂರ್ಖರು ಯಾರಿಲ್ಲ.
ಯಾಕೆಂದರೆ ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದಾಗ, ಬೆಳ್ಳಂಬೆಳಗ್ಗೆ ಅವರನ್ನು ತಯಾರು ಮಾಡುವುದು, ತಿಂಡಿ, ಊಟಗಳ ಬಗ್ಗೆ ಗಮನ ಹರಿಸುವುದು, ಅವರಿಗೆ ಶಾಲೆಯಲ್ಲಿ ಕೊಟ್ಟ ಪಾಠಗಳನ್ನು ಅರ್ಥ ಮಾಡಿಸಿ ಕಲಿಸಿಕೊಡುವುದು, ಇದೆಲ್ಲದರ ನಡುವೆ ನಾವು ಹೈರಾಣಾಗುತ್ತೇವೆ. ಅಂದ ಮೇಲೆ ಬೇಗ ಶಾಲೆಗೆ ಸೇರಿಸಿ ನಮ್ಮ ನೆಮ್ಮದಿಗೆ ನಾವೇ ಕಲ್ಲು ಹಾಕಿಕೊಂಡಂತಲ್ಲವೇ? ಮಕ್ಕಳು ಅವರ ಚಿಕ್ಕ ಪುಟ್ಟ ಕೆಲಸ ಅವರೇ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧರಾದಾಗ , ನಮಗೂ ನೆಮ್ಮದಿ. ಹಾಗೇ ಕಲಿಕೆಯ ಮಹತ್ವ ತಿಳಿಸಿಕೊಡಲೂ ಅನುಕೂಲ.





