
ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಬೋಧಿ ಪ್ರಕಾಶನ
ಒಮ್ಮೆ ಒಂದು ಗ್ರಾಮದಲ್ಲಿ ಧರ್ಮದಾಸ ಎಂಬ ಸಜ್ಜನನಿದ್ದ. ಅವನು ಮಹಾ ಪಂಡಿತನಲ್ಲ, ತಪಸ್ವಿಯೂ ಅಲ್ಲ. ಆದರೆ ಅವನ ಜೀವನವೇ ಧರ್ಮದ ಪ್ರತಿಬಿಂಬವಾಗಿತ್ತು. ಪ್ರತಿದಿನ ಪ್ರಾತಃಕಾಲ ಎದ್ದು, ಮನೆಯ ಹಿರಿಯರನ್ನು ಸ್ಮರಿಸಿ, ದೇವರನ್ನು ಪೂಜಿಸಿ, ನಂತರ ತನ್ನ ಕುಟುಂಬದ ಹೊಣೆ ಹೊತ್ತು ದುಡಿಯುತ್ತಿದ್ದ.
ಅವನಿಗೆ ಸೂರ್ಯ ಎಂಬ ಒಬ್ಬ ಮಗನಿದ್ದ. ಸೂರ್ಯನು ಯೌವನಕ್ಕೆ ಬಂದಾಗ, “ನಾನು ಕಾಶಿ, ಗಯೆ, ರಾಮೇಶ್ವರ ತೀರ್ಥಗಳಿಗೆ ಹೋಗಿ ಪುಣ್ಯ ಸಂಪಾದಿಸುತ್ತೇನೆ” ಎಂದು ತಂದೆಗೆ ಹೇಳಿದ. ತಂದೆ ನಗುತಲೇ ಹೇಳಿದರು:“ಮಗನೇ, ತೀರ್ಥಯಾತ್ರೆ ಒಳ್ಳೆಯದೇ. ಆದರೆ ಹೊರಡುವ ಮೊದಲು ಒಂದು ಕೆಲಸ ಮಾಡು.”
ಸೂರ್ಯನು ಕೇಳಿದ: “ಏನು ತಂದೆ?”
ತಂದೆ ಹೇಳಿದರು: “ನಿನ್ನ ತಾಯಿಗೆ ಮತ್ತು ನನಗೆ ಪ್ರತಿದಿನ ಸೇವೆ ಮಾಡು. ನಮ್ಮ ಪಾದಗಳನ್ನು ತೊಳೆಯು, ನಮ್ಮ ಆಶೀರ್ವಾದ ಪಡೆ.”
ಸೂರ್ಯನು ಹಾಗೆ ಮಾಡಿದ. ಕೆಲ ವರ್ಷಗಳ ಕಾಲ ತಂದೆ-ತಾಯಿಯ ಸೇವೆಯಲ್ಲೇ ತನ್ನ ಜೀವನವನ್ನು ಅರ್ಪಿಸಿದ. ಅವರ ಮಾತನ್ನು ದೇವರ ವಾಕ್ಯವೆಂದು ಭಾವಿಸಿದ.
ಒಂದು ದಿನ ತಂದೆ ಹೇಳಿದರು:“ಇಗ ನೀನು ತೀರ್ಥಯಾತ್ರೆಗೆ ಹೋಗಬಹುದು.”
ಸೂರ್ಯನು ಕಾಶಿಗೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದ. ಅಲ್ಲಿ ಒಬ್ಬ ಋಷಿಯನ್ನು ಭೇಟಿಯಾದ. ಋಷಿ ಅವನನ್ನು ನೋಡಿ ಹೇಳಿದರು:“ಮಗನೇ, ನೀನು ಈಗಾಗಲೇ ಮಹಾ ಪುಣ್ಯವಂತ.” ಸೂರ್ಯ ಆಶ್ಚರ್ಯಪಟ್ಟು ಕೇಳಿದ:“ಸ್ವಾಮೀ, ನಾನು ಇನ್ನೂ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಿಲ್ಲ. ಪುಣ್ಯ ಹೇಗೆ?”
ಋಷಿ ಉತ್ತರಿಸಿದರು:“ಯಸ್ಯ ಪಿತಾ ತೀರ್ಥರೂಪಃ, ತಸ್ಯ ಕಿಮನ್ಯತ್ ತೀರ್ಥಯಾತ್ರಯಾ? ಯಾವನಿಗೆ ತಂದೆಯೇ ತೀರ್ಥಸ್ವರೂಪನೋ, ಅವನಿಗೆ ಇನ್ನೆಲ್ಲಿ ತೀರ್ಥ ಬೇಕು?”
ಆ ಕ್ಷಣ ಸೂರ್ಯನಿಗೆ ಅರಿವಾಯಿತು—ತಂದೆಯ ಸೇವೆಯೇ ಮಹಾತೀರ್ಥ, ತಂದೆಯ ಆಶೀರ್ವಾದವೇ ಮಹಾಪುಣ್ಯ.
ಅವನು ತಕ್ಷಣ ಮನೆಗೆ ಹಿಂತಿರುಗಿ ತಂದೆಯ ಪಾದಗಳಲ್ಲಿ ಶಿರಸುವಿಟ್ಟು ನಮಸ್ಕರಿಸಿದ. ಅಂದಿನಿಂದ ಗ್ರಾಮದಲ್ಲಿ ಒಂದು ಮಾತು ಪ್ರಸಿದ್ಧಿಯಾಯಿತು.“ತೀರ್ಥರೂಪ ತಂದೆಯವರಿಗೆ ನಮಸ್ಕಾರ ಸಲ್ಲಿಸುವವನು ಜೀವನದಲ್ಲೇ ಮೋಕ್ಷದ ದಾರಿ ಕಾಣುತ್ತಾನೆ.”





