
ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಭೋಧಿ ಪ್ರಕಾಶನ
ಒಂದು ಹಳ್ಳಿಯಲ್ಲಿ ರಾಮಯ್ಯ ಎಂಬ ದಯಾಳು ರೈತನು ವಾಸಿಸುತ್ತಿದ್ದನು. ಅವನಿಗೆ ಇಬ್ಬರು ಮಕ್ಕಳು – ರವಿ ಮತ್ತು ಮಣಿ. ರಾಮಯ್ಯ ದಿನವೂ ಕಷ್ಟಪಟ್ಟು ಹೊಲದಲ್ಲಿ ಕೆಲಸ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದ್ದನು.
ರವಿ ಓದಿನಲ್ಲಿ ಚಾಣಾಕ್ಷನಾಗಿದ್ದ. ಮಣಿ ಕೂಡ ಸಹೋದರನಂತೆ ಶಾಲೆಗೆ ಹೋಗುತ್ತಿದ್ದ. ಆದರೆ ಅವರು ದೊಡ್ಡವರಾದಂತೆ, ತಮ್ಮ ತಂದೆಯ ಪರಿಶ್ರಮವನ್ನು ಮರೆತುಬಿಟ್ಟರು. “ಇದು ನಮ್ಮ ಹಕ್ಕು,” ಎಂದುಕೊಂಡು, ತಂದೆಯ ಕಷ್ಟವನ್ನು ಗಮನಿಸದೇ ತಮ್ಮ ಆಸೆಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದರು.
ಒಂದು ವರ್ಷ ಭಾರೀ ಬರ ಬಂತು. ಬೆಳೆ ಹಾಳಾಯಿತು. ಹಣದ ಅಭಾವ ಉಂಟಾಯಿತು. ರಾಮಯ್ಯ ತನ್ನ ಅಗತ್ಯಗಳನ್ನು ಬಿಟ್ಟು ಮಕ್ಕಳ ಓದಿಗೆ ಹಣ ಒದಗಿಸಿದನು. ಆದರೆ ಮಕ್ಕಳು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. “ಇನ್ನೂ ಹಣ ಬೇಕು,” ಎಂದು ಅವರು ತಂದೆಯನ್ನು ಒತ್ತಾಯಿಸುತ್ತಿದ್ದರು.
ಒಂದು ದಿನ ರಾಮಯ್ಯ ಅಸ್ವಸ್ಥನಾದನು. ಕೆಲಸಕ್ಕೆ ಹೋಗಲಾಗಲಿಲ್ಲ. ಆಗ ಮನೆಯ ಖರ್ಚು ಹೇಗೆ ನಡೆಯುತ್ತದೆ ಎಂಬುದು ಮಕ್ಕಳಿಗೆ ಗೊತ್ತಾಯಿತು. ಅವರ ಕೈಯಲ್ಲಿ ಹಣವಿಲ್ಲ. ಊಟಕ್ಕೂ ಕಷ್ಟವಾಯಿತು. ಆಗ ಮಾತ್ರ ತಂದೆಯ ಪರಿಶ್ರಮದ ಮೌಲ್ಯ ಅವರಿಗೆ ಅರಿವಾಯಿತು.
ರವಿ ಮತ್ತು ಮಣಿ ತಮ್ಮ ತಪ್ಪನ್ನು ಅರಿತು ತಂದೆಯ ಬಳಿ ಕ್ಷಮೆ ಕೇಳಿದರು. “ನಾವು ಕೃತಘ್ನರಾಗಿದ್ದೇವೆ. ನಿಮ್ಮ ತ್ಯಾಗವನ್ನು ನಾವು ಅರ್ಥ ಮಾಡಿಕೊಳ್ಳಲಿಲ್ಲ,” ಎಂದು ಅಳುತ್ತ ಹೇಳಿದರು.
ರಾಮಯ್ಯ ಮುದ್ದಾಗಿ ನಗುತ್ತ, “ತಪ್ಪು ಅರಿತುಕೊಳ್ಳುವುದು ದೊಡ್ಡ ಗುಣ. ಮುಂದೆ ಯಾರದರೂ ಮಾಡಿದ ಉಪಕಾರವನ್ನು ಮರೆಯಬೇಡಿ,” ಎಂದು ಹೇಳಿದರು.
ಆ ದಿನದಿಂದ ಮಕ್ಕಳು ಕೃತಜ್ಞತೆಯೊಂದಿಗೆ ನಡೆದುಕೊಳ್ಳಲು ಪ್ರಾರಂಭಿಸಿದರು.
ನೀತಿಃ ಕೃತಘ್ನತೆ ಜೀವನದಲ್ಲಿ ಸಂಬಂಧಗಳನ್ನು ಹಾಳು ಮಾಡುತ್ತದೆ. ಕೃತಜ್ಞತೆ ಮಾತ್ರ ಪ್ರೀತಿಯನ್ನು ಹೆಚ್ಚಿಸುತ್ತದೆ.





