
ನವದೆಹಲಿ, ಏ.10: ಅಮೆರಿಕ–ಇರಾನ್ ಶಾಂತಿ ಮಾತುಕತೆಗೂ ಮುನ್ನ ಪಾಕಿಸ್ತಾನದ ಪಾತ್ರದ ಬಗ್ಗೆ ಇಸ್ರೇಲ್ ತೀವ್ರ ಅನುಮಾನ ವ್ಯಕ್ತಪಡಿಸಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಪಾಕಿಸ್ತಾನವನ್ನು ಇಸ್ರೇಲ್ ನಂಬುವುದಿಲ್ಲ ಮತ್ತು ಅಮೆರಿಕವೂ ಇದೇ ರೀತಿಯ ದೃಷ್ಟಿಕೋನ ಹೊಂದಿದೆ ಎಂದು ಹೇಳಿದ್ದಾರೆ.
ಎನ್.ಡಿ.ಟಿ.ವಿ ಜೊತೆ ಮಾತನಾಡಿದ ಅವರು, “ನಾವು ಪಾಕಿಸ್ತಾನಿಗಳನ್ನು ನಂಬುವುದಿಲ್ಲ. ಅಮೆರಿಕ ಅವರುಗಳನ್ನು ಎಷ್ಟರ ಮಟ್ಟಿಗೆ ನಂಬುತ್ತದೆ ಎಂಬುದರ ಬಗ್ಗೆ ಅತಿಯಾದ ನಿರೀಕ್ಷೆ ಇಡಬಾರದು. ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪಾತ್ರ ಕೇವಲ ಸಹಾಯಕವಾಗಿದ್ದು, ಅದಕ್ಕಿಂತ ಹೆಚ್ಚೇನೂ ಅಲ್ಲ” ಎಂದು ಸ್ಪಷ್ಟಪಡಿಸಿದರು.
ಅಮೆರಿಕ–ಇರಾನ್ ಮಾತುಕತೆಯಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಕುರಿತು ಮಾತನಾಡಿದ ಅವರು, ಪರಿಸ್ಥಿತಿಯನ್ನು ನಿಭಾಯಿಸಲು ಇಸ್ರೇಲ್ ಪಾಕಿಸ್ತಾನವನ್ನಲ್ಲ, ಅಮೆರಿಕವನ್ನೇ ಅವಲಂಬಿಸಿದೆ ಎಂದು ಹೇಳಿದರು. “ಈ ಎರಡು ವಾರಗಳ ವಿರಾಮ ಅವಧಿಯಲ್ಲಿ ಅಮೆರಿಕ ಏನು ಕ್ರಮ ಕೈಗೊಳ್ಳುತ್ತದೆ ಎಂಬುದೇ ಮುಖ್ಯ. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ನಾವು ಅವರ ಮೇಲೆಯೇ ಭರವಸೆ ಇಟ್ಟಿದ್ದೇವೆ” ಎಂದರು.
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಪಾಕಿಸ್ತಾನ ಖಂಡನೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅಜರ್, ದೇಶದ ಭದ್ರತೆಗಾಗಿ ಅಗತ್ಯವಿರುವ ಕ್ರಮಗಳನ್ನು ಟೆಲ್ ಅವಿವ್ ಮುಂದುವರಿಸುತ್ತದೆ ಎಂದು ತಿಳಿಸಿದ್ದಾರೆ.
ಹಿಂದಿನ ಸಂದರ್ಶನವೊಂದರಲ್ಲಿ ಗಾಜಾ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆಯಾಗಿ ಕಾರ್ಯನಿರ್ವಹಿಸುವುದನ್ನು ಇಸ್ರೇಲ್ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದರು. ಅಲ್ಲದೆ, ಹಮಾಸ್ ಹಾಗೂ ಲಷ್ಕರ್-ಎ-ತೈಬಾ ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ನಡುವಿನ ಸಂಪರ್ಕಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಇದೀಗ ಅಮೆರಿಕ ಮತ್ತು ಇರಾನ್ ನಡುವೆ ನಡೆಯಲಿರುವ ಮಾತುಕತೆಗಳನ್ನು ಪಾಕಿಸ್ತಾನ ಆಯೋಜಿಸುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇತ್ತೀಚೆಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಎರಡು ವಾರಗಳ ಷರತ್ತುಬದ್ಧ ಕದನ ವಿರಾಮ ಒಪ್ಪಂದವೂ ಆಗಿರುವುದು ಗಮನಾರ್ಹ.





