
ಕಾನ್ಪುರ, ಫೆ.19: ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ಶುಕ್ಲಗಂಜ್ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಜೇನುನೊಣಗಳ ಹಿಂಡು ಅಚಾನಕ್ ದಾಳಿ ನಡೆಸಿ 65 ವರ್ಷದ ಅಂಪೈರ್ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ದಾಳಿಯಲ್ಲಿ ಹಲವಾರು ಆಟಗಾರರು ಕೂಡ ಗಾಯಗೊಂಡಿದ್ದಾರೆ.
ಶುಕ್ಲಗಂಜ್‌ನ ಸಪ್ರು ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದ ಸಂದರ್ಭ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಪುರ ನಿವಾಸಿ ಮಾಣಿಕ್ ಗುಪ್ತಾ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಇದೇ ವೇಳೆ ಮೈದಾನದಲ್ಲಿದ್ದ ಆಟಗಾರರು ಹಾಗೂ ಇತರರ ಮೇಲೂ ಜೇನುನೊಣಗಳು ಎರಗಿದ ಕಾರಣ ಭೀತಿ ಉಂಟಾಯಿತು.
ದಾಳಿಯಿಂದ ತಪ್ಪಿಸಿಕೊಳ್ಳಲು ಆಟಗಾರರು ಮತ್ತು ಪ್ರೇಕ್ಷಕರು ಸ್ಥಳದಿಂದ ಓಡಿಹೋದರು. ಆದರೆ, ಗುಪ್ತಾ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ಅವರನ್ನು ಶುಕ್ಲಗಂಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





