
ಕೇರಳ, ಫೆ.13: ನಗರಗಳಲ್ಲಿ ಟ್ರಾಫಿಕ್ ಜಾಮ್ ನಡುವೆಯೇ ರೆಡ್ ಸಿಗ್ನಲ್ ತಪ್ಪಿಸಲು ಕೆಲ ದ್ವಿಚಕ್ರ ವಾಹನ ಸವಾರರು ಫುಟ್‌ಪಾತ್ ಮೇಲೆ ವಾಹನ ಹತ್ತಿಸಿ ಸಾಗುವ ಘಟನೆಗಳು ಸಾಮಾನ್ಯವಾಗಿವೆ. ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆಯಲು ನಿರ್ಮಿಸಿರುವ ಫುಟ್‌ಪಾತ್‌ಗಳಲ್ಲೇ ವಾಹನಗಳು ಓಡಿದಾಗ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತದೆ. ಅನೇಕರು ಅಸಹನೆ ವ್ಯಕ್ತಪಡಿಸುತ್ತಾ ಮುಂದುವರಿಯುತ್ತಾರೆ.
ಆದರೆ ಕೋಝಿಕ್ಕೋಡ್ನ ಎರಂಜಿಪ್ಪಾಳಂ ಜಂಕ್ಷನ್ನಲ್ಲಿ ಭಿನ್ನ ಘಟನೆಯೊಂದು ನಡೆದಿದೆ. ಸುಮಾರು 60 ವರ್ಷದ ಮಹಿಳೆಯೊಬ್ಬರು, ಫುಟ್‌ಪಾತ್ ಮೂಲಕ ಹೋಗಿ ರೆಡ್ ಸಿಗ್ನಲ್ ತಪ್ಪಿಸಲು ಯತ್ನಿಸಿದ್ದ ಸ್ಕೂಟರ್ ಸವಾರನನ್ನು ಧೈರ್ಯದಿಂದ ತಡೆದು, ವಾಹನವನ್ನು ಮತ್ತೆ ಮುಖ್ಯ ರಸ್ತೆಗೆ ಇಳಿಯುವಂತೆ ಮಾಡಿದರು.
ಸ್ಕೂಟರ್ ಸವಾರ ಪಕ್ಕದಿಂದ ನುಸುಳಲು ಪ್ರಯತ್ನಿಸಿದಾಗ, ಮಹಿಳೆ ಕಾಲುಗಳನ್ನು ಮುಂದಿಟ್ಟು ದಾರಿ ತಡೆದರು. ಬಳಿಕ ತಮ್ಮ ಮೊಬೈಲ್ ಫೋನ್ ತೆಗೆದು ವಾಹನದ ನೋಂದಣಿ ಸಂಖ್ಯೆಯ ಫೋಟೋ ತೆಗೆದು, ನಿಯಮ ಉಲ್ಲಂಘನೆಯನ್ನು ಅಧಿಕಾರಿಗಳಿಗೆ ತಿಳಿಸುವ ಉದ್ದೇಶವಿರುವಂತೆ ಸ್ಪಷ್ಟ ಸಂದೇಶ ನೀಡಿದರು. ಇದರಿಂದ ಸವಾರ ಹಿಂತಿರುಗಿ ಮುಖ್ಯ ರಸ್ತೆಗೆ ತೆರಳಿ ಇತರ ವಾಹನಗಳ ಸಾಲಿನಲ್ಲಿ ಸೇರಬೇಕಾಯಿತು.
ಈ ಘಟನೆ ನಿನ್ನೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಮಹಿಳೆಯ ಧೈರ್ಯ ಮತ್ತು ನಾಗರಿಕ ಜವಾಬ್ದಾರಿಯ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೇರಳದ ನಾಗರಿಕ ಪ್ರಜ್ಞೆ ಮತ್ತು ಸಾಕ್ಷರತೆಯ ಪ್ರತೀಕವೆಂದು ಹಲವರು ಶ್ಲಾಘಿಸಿದ್ದಾರೆ.





