ಖ್ಯಾತ ನಿರ್ದೇಶಕ ಜೋ ಸೈಮನ್ ನಿಧನ!

0
2
Advertisement

ಬೆಂಗಳೂರು, ಫೆ.13: ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ಸಾಹಸ ಸಿಂಹ ಹಾಗೂ ಅಂಬರೀಶ್ ಅಭಿನಯದ ಏಜೆಂಟ್ ಅಮರ್ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಜೋ ಸೈಮನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಗರದ ಫಿಲ್ಮ್ ಚೇಂಬರ್ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಅಚಾನಕ್ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯವರಾದ ಜೋ ಸೈಮನ್ ಅವರು 1946ರಲ್ಲಿ ಜನಿಸಿದ್ದರು. 1967ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಕೆಎಸ್‌ಆರ್ ದಾಸ್, ಆರ್‌ಎನ್ ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿ ಅನುಭವ ಸಂಪಾದಿಸಿದ್ದರು. 1977ರಲ್ಲಿ ಒಂದು ಪ್ರೇಮದ ಕಥೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ ಅವರು, ಬಳಿಕ ಸುಮಾರು 100ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.

ಬಂಗಾರದ ಗುಡಿ (1976), ಸಾಹಸ ಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದ ಜನಪ್ರಿಯ ಚಿತ್ರಗಳು ಅವರ ನಿರ್ದೇಶನದ ಪ್ರಮುಖ ಕೃತಿಗಳಾಗಿವೆ.

ಅವರ ಅಂತಿಮ ದರ್ಶನಕ್ಕೆ ನಾಳೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಜೋ ಸೈಮನ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here