ರಾಜಾ ರವಿವರ್ಮ ಕಲಾಕೃತಿ 167 ಕೋಟಿಗೆ ಹರಾಜು!

0
5
Advertisement

ಮುಂಬೈ, ಏ.02: ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದ್ದು, ರಾಜಾ ರವಿವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ತೈಲವರ್ಣ ಕಲಾಕೃತಿ ₹167 ಕೋಟಿಗೆ ಹರಾಜಾಗಿ ದೇಶದ ಅತ್ಯಂತ ದುಬಾರಿ ಕಲಾಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈನಲ್ಲಿ ಬುಧವಾರ ನಡೆದ ಸ್ಯಾಫ್ರನ್ ಆರ್ಟ್ ಹರಾಜಿನಲ್ಲಿ ಈ ಅಪರೂಪದ ಕಲಾಕೃತಿಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಬಿಲಿಯನೇರ್ ಸೈರಸ್ ಪೂನವಾಲಾ ಖರೀದಿಸಿದ್ದಾರೆ.

ಇದಕ್ಕೂ ಮುನ್ನ ಎಂಎಫ್ ಹುಸೇನ್ ಅವರ ‘ಅನ್‌ಟೈಟಲ್ಡ್ (ಗ್ರಾಮ ಯಾತ್ರಾ)’ ಚಿತ್ರ ₹118 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ದೆಹಲಿ ಮೂಲದ ಕಿರಣ್ ನಾಡರ್ ಅದನ್ನು ಖರೀದಿಸಿದ್ದರು. ಆದರೆ ಈಗ ರವಿವರ್ಮರ ಈ ಕಲಾಕೃತಿ ಆ ದಾಖಲೆಯನ್ನು ಮೀರಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

1890ರಲ್ಲಿ ರಚಿಸಲಾದ ಈ ಚಿತ್ರದಲ್ಲಿ ತಾಯಿ ಯಶೋಧಾ ಮತ್ತು ಬಾಲ ಕೃಷ್ಣನ ನಡುವಿನ ಮಮತೆಯ ಕ್ಷಣವನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ. ಹಸುವಿನ ಬಳಿಯಲ್ಲಿ ಕುಳಿತು ಹಾಲು ಕರೆಯುತ್ತಿರುವ ಯಶೋಧಾಳ ಹಿಂದೆ ಲೋಟ ಹಿಡಿದು ನಿಂತಿರುವ ಕೃಷ್ಣನ ದೃಶ್ಯವು ಚಿತ್ರದಲ್ಲಿ ಜೀವಂತವಾಗಿ ಮೂಡಿಬಂದಿದೆ.

ರಾಜಾ ರವಿವರ್ಮ ಅವರ ಕಲಾಕೃತಿಗಳು ರಾಷ್ಟ್ರೀಯ ಸಂಪತ್ತಾಗಿ ವರ್ಗೀಕರಿಸಲ್ಪಟ್ಟಿರುವುದರಿಂದ, ಈ ಚಿತ್ರವನ್ನು ವಿದೇಶಕ್ಕೆ ಕೊಂಡೊಯ್ಯಲು ಅವಕಾಶವಿಲ್ಲ. ಇಂತಹ ಐತಿಹಾಸಿಕ ಕಲಾಕೃತಿಯನ್ನು ಸಂರಕ್ಷಿಸುವುದು ಗೌರವ ಮತ್ತು ಜವಾಬ್ದಾರಿಯಾಗಿದೆ ಎಂದು ಖರೀದಿದಾರ ಸೈರಸ್ ಪೂನವಾಲಾ ತಿಳಿಸಿದ್ದಾರೆ.

ಸಾರ್ವಜನಿಕರ ವೀಕ್ಷಣೆಗೆ ಇದನ್ನು ಕಾಲಕಾಲಕ್ಕೆ ಲಭ್ಯವಾಗುವಂತೆ ಮಾಡುವುದಾಗಿ ಅವರು ಹೇಳಿದ್ದಾರೆ. ದೆಹಲಿ ಆರ್ಟ್ ಗ್ಯಾಲರಿಯ ಸಿಇಒ ಮತ್ತು ಎಂಡಿ ಆಹಿಶ್ ಆನಂದ್ ಅವರ ಪ್ರಕಾರ, “₹167.2 ಕೋಟಿಯಲ್ಲಿ ಮಾರಾಟವಾದ ಈ ಚಿತ್ರವು ತಾಯಿ-ಮಗುವಿನ ಸಾರ್ವತ್ರಿಕ ಭಾವನೆಗಳನ್ನು ಪ್ರತಿಬಿಂಬಿಸುವ ಕಲಾಕೃತಿ. ಇದು ಭಾರತೀಯ ಕಲೆಯ ‘ಮೋನಾಲಿಸಾ’ ಎಂದೇ ಪರಿಗಣಿಸಬಹುದು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹರಾಜು ಭಾರತೀಯ ಕಲಾ ಮಾರುಕಟ್ಟೆಗೆ ಮಹತ್ವದ ತಿರುವು ತಂದುಕೊಟ್ಟಿದೆ ಎಂದು ಕಲಾವಿದರ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Advertisement

LEAVE A REPLY

Please enter your comment!
Please enter your name here