
ಹೊಸದಿಲ್ಲಿ, ಫೆ.25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬುಧವಾರದಿಂದ ಎರಡು ದಿನಗಳ ಅಧಿಕೃತ ಇಸ್ರೇಲ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಚರ್ಚೆಗಳು ನಡೆಯಲಿವೆ.
ಇಂದು ಹಾಗೂ ನಾಳೆ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಇಬ್ಬರೂ ನಾಯಕರು ಒಟ್ಟಾಗಿ ಭಾಗವಹಿಸಲಿದ್ದಾರೆ. ೨೦೧೭ರ ಜುಲೈನಲ್ಲಿ ನಡೆದ ಹಿಂದಿನ ಐತಿಹಾಸಿಕ ಭೇಟಿಯಂತೆ, ತೆಲ್ ಅವೀವ್ ವಿಮಾನ ನಿಲ್ದಾಣದಲ್ಲಿ ನೆತನ್ಯಾಹು ಅವರು ಪ್ರಧಾನಿ ಮೋದಿಯನ್ನು ಸ್ವಾಗತಿಸುವ ನಿರೀಕ್ಷೆಯಿದೆ. ಬಳಿಕ ಇಬ್ಬರೂ ಜೆರುಸಲೇಮ್ ಗೆ ಒಟ್ಟಾಗಿ ಪ್ರಯಾಣಿಸಲಿದ್ದಾರೆ.
ನಾಳೆ ದ್ವಿಪಕ್ಷೀಯ ಮಾತುಕತೆಗಳ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ. ಇದರೊಂದಿಗೆ ಪ್ರಧಾನಿ ಮೋದಿ ಇಸ್ರೇಲ್ ಸಂಸತ್ತಾದ ಕ್ನೆಸೆಟ್ ಅನ್ನು ಉದ್ದೇಶಿಸಿ ಭಾಷಣ ಮಾಡುವ ಗೌರವಕ್ಕೂ ಪಾತ್ರರಾಗಲಿದ್ದಾರೆ. ಇದು ಕ್ನೆಸೆಟ್‌ನಲ್ಲಿ ಭಾಷಣ ಮಾಡುವ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಯಾಗಲಿದೆ.
ಪ್ರವಾಸದ ಅಂಗವಾಗಿ ಪ್ರಧಾನಿ ಮೋದಿ ಖಾಸಗಿ ಭೋಜನ, ನವೋತ್ಪಾದನಾ ಕಾರ್ಯಕ್ರಮ, ಯಾದ್ ವಶೆಮ್ ಹೋಲೋಕಾಸ್ಟ್ ಸ್ಮಾರಕ ಗೆ ಭೇಟಿ ಹಾಗೂ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ-ಯಹೂದಿ ಸಮುದಾಯದೊಂದಿಗೆ ಸಂವಾದ ನಡೆಸುವ ಸಾಧ್ಯತೆ ಇದೆ.
ಈ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ನವೋತ್ಪಾದನೆ, ಕೃಷಿ, ಜಲ ನಿರ್ವಹಣೆ, ರಕ್ಷಣಾ ಹಾಗೂ ಭದ್ರತೆ, ವಾಣಿಜ್ಯ ಮತ್ತು ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಮಹತ್ವದ ಪರಸ್ಪರ ಆಸಕ್ತಿಯ ವಿಷಯಗಳ ಮೇಲೂ ಅಭಿಪ್ರಾಯ ವಿನಿಮಯವಾಗಲಿದೆ.
ಪ್ರವಾಸಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಭಾರತ–ಇಸ್ರೇಲ್ ನಡುವಿನ ಬಲವಾದ ಮತ್ತು ಬಹುಮುಖ ತಂತ್ರಾತ್ಮಕ ಸಹಭಾಗಿತ್ವವು ಗಮನಾರ್ಹ ಬೆಳವಣಿಗೆ ಕಂಡಿದೆ. ಈ ಭೇಟಿ ನಮ್ಮ ದೀರ್ಘಕಾಲೀನ ಬಂಧಗಳನ್ನು ಇನ್ನಷ್ಟು ಬಲಪಡಿಸಿ, ಸ್ಥಿರ, ನವೋತ್ಪಾದನಾಶೀಲ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಸಂಯುಕ್ತ ದೃಷ್ಟಿಯನ್ನು ಮುಂದುವರಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಪ್ರಧಾನಿ ಮೋದಿಯವರ ಎರಡನೇ ಇಸ್ರೇಲ್ ಭೇಟಿ. ಮೊದಲ ಭೇಟಿ ೨೦೧೭ರ ಜುಲೈನಲ್ಲಿ ನಡೆದಿದ್ದು, ಅದು ಇಸ್ರೇಲ್‌ಗೆ ಭಾರತೀಯ ಪ್ರಧಾನಮಂತ್ರಿಯೊಬ್ಬರು ನೀಡಿದ ಮೊದಲ ಐತಿಹಾಸಿಕ ಪ್ರವಾಸವಾಗಿತ್ತು. ಇತ್ತೀಚಿನ ಈ ಉನ್ನತ ಮಟ್ಟದ ಭೇಟಿ, ಎರಡೂ ರಾಷ್ಟ್ರಗಳ ನಡುವಿನ ನಿರಂತರ ಸಚಿವಮಟ್ಟದ ವಿನಿಮಯಗಳ ನಂತರ ನಡೆಯುತ್ತಿರುವುದು ಮಹತ್ವ ಪಡೆದಿದೆ.





