
ಬೆಂಗಳೂರು, ಫೆ.12: ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲು ಸಜ್ಜಾಗಿರುವ ಸೂಚನೆಗಳು ದೊರೆತಿವೆ. ಶೀಘ್ರದಲ್ಲೇ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. 2026–27ನೇ ಹಣಕಾಸು ವರ್ಷಕ್ಕೆ ರಾಜ್ಯದಾದ್ಯಂತ ವಿದ್ಯುತ್ ದರವನ್ನು ಸರಾಸರಿ 67 ಪೈಸೆ ಹೆಚ್ಚಿಸುವಂತೆ ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ನೀರಾವರಿ ಪಂಪ್‌ಸೆಟ್‌ಗಳು, ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರಿಗೆ ನೀಡುವ ವಿದ್ಯುತ್ ದರವನ್ನು ಪರಿಷ್ಕರಿಸುವಂತೆ ಕಂಪನಿಗಳು ಪ್ರಸ್ತಾವನೆ ನೀಡಿವೆ. ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿರುವ ಬಹುತೇಕ ಎಸ್ಕಾಂಗಳು ನಷ್ಟದಲ್ಲಿರುವುದರಿಂದ, ಆದಾಯ ಸಮತೋಲನಕ್ಕೆ ದರ ಏರಿಕೆ ಅಗತ್ಯವೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಾರ್ಚ್ 28, 2025ರಂದು ಕೆಇಆರ್‌ಸಿ ವಿದ್ಯುತ್ ದರವನ್ನು ಶೇ.7ರಷ್ಟು ಹೆಚ್ಚಳ ಮಾಡಿತ್ತು. ಆ ವೇಳೆ ಗೃಹಬಳಕೆ ಹಾಗೂ ಕೈಗಾರಿಕಾ ಗ್ರಾಹಕರ ಪ್ರತಿ ಯೂನಿಟ್ ದರದಲ್ಲಿ ಸ್ವಲ್ಪ ಇಳಿಕೆ ಮಾಡಲಾಗಿದ್ದು, ಸ್ಥಿರ ಶುಲ್ಕವನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಇದೀಗ 2025–26, 2026–27 ಮತ್ತು 2027–28ನೇ ಆರ್ಥಿಕ ವರ್ಷಗಳಿಗೆ ದರ ನಿಗದಿಯಾಗಿದ್ದರೂ, ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ‘ಹೆಚ್ಚುವರಿ ದರ ಏರಿಕೆ’ ಬಗ್ಗೆ ಕೆಇಆರ್‌ಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 2026ರ ಹಣಕಾಸು ವರ್ಷಕ್ಕೆ ಪ್ರತಿ ಯೂನಿಟ್‌ಗೆ 36 ಪೈಸೆ ಪಿ & ಜಿ ಸರ್‌ಚಾರ್ಜ್ (ಸರ್ಕಾರದ ಕೊಡುಗೆ), 2027ಕ್ಕೆ 35 ಪೈಸೆ ಹಾಗೂ 2028ಕ್ಕೆ 34 ಪೈಸೆ ಸೇರಿಸುವ ಆದೇಶವೂ ಇದಕ್ಕೂ ಮೊದಲು ನೀಡಲಾಗಿತ್ತು.
ಬೆಸ್ಕಾಂ ಸೇರಿದಂತೆ ರಾಜ್ಯದ ವಿವಿಧ ಎಸ್ಕಾಂಗಳು 2024–25ನೇ ಸಾಲಿನ ಕಾರ್ಯನಿರ್ವಹಣಾ ವರದಿ ಹಾಗೂ ದರ ಏರಿಕೆ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ಸಲ್ಲಿಸಿವೆ. ಇದರ ಬೆನ್ನಲ್ಲೇ ಸಾರ್ವಜನಿಕರಿಂದ ಅಹವಾಲು ಹಾಗೂ ಆಕ್ಷೇಪಣೆಗಳನ್ನು ಆಲಿಸಲು ಆಯೋಗ ಮುಂದಾಗಿದೆ.
ಫೆಬ್ರವರಿ 16ರಿಂದ 27ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕೆಇಆರ್‌ಸಿ ಸಾರ್ವಜನಿಕ ವಿಚಾರಣಾ ಸಭೆಗಳನ್ನು ನಡೆಸಲಿದೆ. ಗ್ರಾಹಕರು ಈ ಸಭೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ನೀರಾವರಿ ಪಂಪ್‌ಸೆಟ್, ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರ ಸುಂಕ ಬದಲಾವಣೆಗೆ ಸಂಬಂಧಿಸಿದ ಸಾರ್ವಜನಿಕ ವಿಚಾರಣೆ ಫೆಬ್ರವರಿ 25, 2026ರಂದು ನಡೆಯಲಿದೆ.
ಏಪ್ರಿಲ್ 1ರಿಂದ ದರ ಏರಿಕೆ?
ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಇದು ಜಾರಿಯಾದರೆ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳುವುದು ಖಚಿತ.





