ಕೇರಳಂ ಮರುನಾಮಕರಣಕ್ಕೆ ವಿರೋಧ; ಹೆಸರಿಗಿಂತ ಅಭಿವೃದ್ಧಿಗೆ ಆದ್ಯತೆ ನೀಡಿ-ಶಶಿ ತರೂರ್

0
6
Advertisement

ಹೊಸದಿಲ್ಲಿ, ಫೆ.25: ಕೇರಳ ರಾಜ್ಯವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಹೆಸರು ಬದಲಾವಣೆಗೆ ಆದ್ಯತೆ ನೀಡುತ್ತಿರುವ ಸರಕಾರ, ರಾಜ್ಯಕ್ಕೆ ಅಗತ್ಯವಿರುವ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಮಲಯಾಳಂ ಭಾಷೆಯಲ್ಲಿ ಕೇರಳವನ್ನು ಈಗಾಗಲೇ ‘ಕೇರಳಂ’ ಎಂದೇ ಕರೆಯಲಾಗುತ್ತಿದೆ. ಇದೀಗ ಇಂಗ್ಲಿಷ್‌ನಲ್ಲೂ ಮಲಯಾಳಂ ಪದವನ್ನೇ ಬಳಸುವುದರಿಂದ ಯಾವ ಮಹತ್ವದ ಬದಲಾವಣೆ ಸಂಭವಿಸುತ್ತದೆ ಎಂಬುದು ಸ್ಪಷ್ಟವಿಲ್ಲ ಎಂದು ತರೂರ್ ಪ್ರಶ್ನಿಸಿದ್ದಾರೆ. “ನಮ್ಮ ರಾಜ್ಯಕ್ಕೆ ಒಂದು ಹೊಸ AIIMS ಆಗಲಿ, ಯಾವುದೇ ಪ್ರಮುಖ ಕೇಂದ್ರ ಸಂಸ್ಥೆಯಾಗಲಿ ದೊರೆತಿಲ್ಲ. ಕೇಂದ್ರ ಬಜೆಟ್‌ನಲ್ಲೂ ಹೊಸ ಯೋಜನೆಗಳ ಘೋಷಣೆ ಇಲ್ಲ. ಆದರೆ ಹೆಸರು ಬದಲಾವಣೆ ವಿಚಾರ ಬಂದಾಗ ಮಾತ್ರ ತಕ್ಷಣ ಅನುಮೋದನೆ ಸಿಗುತ್ತದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, ‘ಕೇರಳಂ’ ಎಂಬ ಹೊಸ ಹೆಸರಿನ ನಂತರ ಅಲ್ಲಿನ ಜನರನ್ನು ಏನೆಂದು ಕರೆಯಬೇಕು ಎಂಬ “ಸಣ್ಣ ಭಾಷಾ ಪ್ರಶ್ನೆ”ಯನ್ನೂ ಪ್ರಸ್ತಾಪಿಸಿದ್ದಾರೆ. ‘ಕೇರಲೈಟ್’ ಅಥವಾ ‘ಕೇರಳನ್’ ಬದಲಿಗೆ ‘ಕೇರಳಮೈಟ್’ ಎಂದರೆ ಅದು ಸೂಕ್ಷ್ಮಾಣುವಿನ ಹೆಸರಿನಂತೆ ತೋರುತ್ತದೆ. ‘ಕೇರಳಮಿಯನ್’ ಎಂದರೆ ಅಪರೂಪದ ಖನಿಜದ ಹೆಸರಿನಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

Advertisement

LEAVE A REPLY

Please enter your comment!
Please enter your name here