
ನವದೆಹಲಿ, ಏಪ್ರಿಲ್ 1: ದೇಶದಾದ್ಯಂತ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಇದು ಭವಿಷ್ಯದ ಕಲ್ಯಾಣ ಯೋಜನೆಗಳು ಹಾಗೂ ರಾಜಕೀಯ ಪ್ರತಿನಿಧಿತ್ವಕ್ಕೆ ಮಹತ್ವದ ಆಧಾರವಾಗಲಿದೆ.
ಹಿಂದಿನ 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 1.21 ಶತಕೋಟಿ ಆಗಿದ್ದರೆ, ಇದೀಗ ಅದು 140 ಕೋಟಿಗೂ ಹೆಚ್ಚು ಆಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಭಾರತ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ COVID-19 ಸಾಂಕ್ರಾಮಿಕದ ಕಾರಣದಿಂದ ಮುಂದೂಡಲ್ಪಟ್ಟಿತ್ತು.
ಪ್ರಸ್ತುತ ಆರಂಭಗೊಂಡಿರುವ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಬುಧವಾರದಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಈ ಹಂತದಲ್ಲಿ ಗಣತಿದಾರರು ಮನೆಮನೆಗೆ ತೆರಳಿ ವಾಸಸ್ಥಳದ ಸ್ಥಿತಿ, ಸೌಲಭ್ಯಗಳು ಹಾಗೂ ಜೀವನಮಟ್ಟದ ಮಾಹಿತಿ ಸಂಗ್ರಹಿಸಲಿದ್ದಾರೆ. ಜೊತೆಗೆ ನಾಗರಿಕರು ಬಹುಭಾಷಾ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕವೂ ತಮ್ಮ ಮಾಹಿತಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಸೆಪ್ಟೆಂಬರ್‌ನಿಂದ ಮುಂದಿನ ಏಪ್ರಿಲ್ 1ರವರೆಗೆ ನಡೆಯುವ ಎರಡನೇ ಹಂತದಲ್ಲಿ ಧರ್ಮ, ಜಾತಿ ಸೇರಿದಂತೆ ಜನರ ಸಾಮಾಜಿಕ ಹಾಗೂ ಆರ್ಥಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಈ ಮಹಾಯತ್ನಕ್ಕಾಗಿ ದೇಶದಾದ್ಯಂತ 30 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ನಿಯೋಜಿಸುವ ನಿರೀಕ್ಷೆಯಿದೆ. 2011ರಲ್ಲಿ ನಡೆದ ಜನಗಣತಿಯಲ್ಲಿ ಸುಮಾರು 27 ಲಕ್ಷ ಗಣತಿದಾರರು 24 ಕೋಟಿಗೂ ಹೆಚ್ಚು ಕುಟುಂಬಗಳ ಮಾಹಿತಿ ಸಂಗ್ರಹಿಸಿದ್ದರು.
ಇದರೊಂದಿಗೆ, 2027ರ ಜನಗಣತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವೂ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಿದೆ. ರಾಜ್ಯದ ನಾಗರಿಕರು ಆನ್‌ಲೈನ್ ಮೂಲಕ ತಮ್ಮ ಮಾಹಿತಿಯನ್ನು ಸ್ವಯಂವಾಗಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
2026ರ ಏಪ್ರಿಲ್ 1ರಿಂದ 15ರವರೆಗೆ ನಾಗರಿಕರು ಅಧಿಕೃತ ಪೋರ್ಟಲ್ ಮೂಲಕ ತಮ್ಮ ವಿವರಗಳನ್ನು ದಾಖಲಿಸಬೇಕೆಂದು ಸೂಚಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಜಾಗೃತಿ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಜನರು ಸ್ವಯಂಪ್ರೇರಿತರಾಗಿ ನಿಖರ ಮಾಹಿತಿಯನ್ನು ಒದಗಿಸುವಂತೆ ಕರೆ ನೀಡಲಾಗಿದೆ.





