ಬೆಂಗಳೂರು ಮಾಲಿನ್ಯ ತಡೆಗೆ 28 ಶಾಸಕರರೊಂದಿಗೆ ಶೀಘ್ರ ಸಭೆ: ಈಶ್ವರ್‌ ಖಂಡ್ರೆ

0
3
Advertisement

ಬೆಂಗಳೂರು, ಫೆ.26: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಮತ್ತೊಂದು “ಗ್ಯಾಸ್ ಚೇಂಬರ್” ಆಗದಂತೆ ತಡೆಯಲು ತುರ್ತು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ನಗರದಲ್ಲಿನ ಎಲ್ಲ 28 ಶಾಸಕರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರೊಂದಿಗೆ ಉನ್ನತಾಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯು, ಜಲ ಹಾಗೂ ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುರೇಶ್ ಕುಮಾರ್, ನಗರದಲ್ಲಿ ರಸ್ತೆಗಳ ಮೇಲಿನ ಧೂಳಿನಿಂದಾಗಿ ವಾಯು ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇದರಿಂದ ಮಕ್ಕಳಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ವೈದ್ಯರು ಸಹ ಬೆಂಗಳೂರಿನ ಹೊರವಲಯಗಳಿಗೆ ಹೋಗುವಂತೆ ಸಲಹೆ ನೀಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಾಯು ಗುಣಮಟ್ಟ ಕಾಪಾಡಲು ತಕ್ಷಣದ ಕ್ರಮ ಅಗತ್ಯವಿದೆ ಎಂದು ಒತ್ತಾಯಿಸಿದರು.

ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್‌ಗೆ ಸೂಚನೆ

ಇದಕ್ಕೆ ಪ್ರತಿಕ್ರಿಯಿಸಿದ ಪರಿಸರ ಸಚಿವರು, ಈಗಾಗಲೇ ಬೆಂಗಳೂರಿನ 11 ಸ್ಥಿರ ಕೇಂದ್ರಗಳು ಮತ್ತು 13 ಸಂಚಾರಿ ಘಟಕಗಳ ಮೂಲಕ ವಾಯು ಗುಣಮಟ್ಟ ಸೂಚ್ಯಂಕದ (AQI) ಮೌಲ್ಯಮಾಪನ ನಡೆಯುತ್ತಿದೆ ಎಂದು ತಿಳಿಸಿದರು. ವಾಯು ಗುಣಮಟ್ಟ ಸೂಚ್ಯಂಕ 100ರ ಮಿತಿ ದಾಟಿದಲ್ಲಿ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ, ನಿಗದಿತ ಕಾಲಮಿತಿಯಲ್ಲಿ ಪರಿಸ್ಥಿತಿ ನಿಯಂತ್ರಿಸುವಂತೆ ಸೂಚನೆ ನೀಡಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಅವರ ಅಧ್ಯಕ್ಷತೆಯಲ್ಲೇ ಶೀಘ್ರದಲ್ಲಿ ಬೆಂಗಳೂರು ನಗರದ ಎಲ್ಲ ಜನಪ್ರತಿನಿಧಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಉನ್ನತಾಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಸಚಿವ ಖಂಡ್ರೆ ಹೇಳಿದರು.

ಕೆಲ ದಶಕಗಳ ಹಿಂದೆ “ನಿವೃತ್ತರ ಸ್ವರ್ಗ” ಮತ್ತು “ಹವಾನಿಯಂತ್ರಿತ ನಗರ” ಎಂದು ಖ್ಯಾತಿ ಪಡೆದ ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ಬಿಸಿಲ ಬೇಗೆ ಹೆಚ್ಚುತ್ತಿದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದ್ದರೂ, ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಮೂಲಕ ವಾಯು ಗುಣಮಟ್ಟ ರಕ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

Advertisement

LEAVE A REPLY

Please enter your comment!
Please enter your name here