‘ದಿ ಕೇರಳ ಸ್ಟೋರಿ 2’ ಸಿನಿಮಾ ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ತಡೆ!

0
3
Advertisement

ಕೊಚ್ಚಿ, ಫೆ.26: ಫೆಬ್ರವರಿ ೨೭ರಂದು ಬಿಡುಗಡೆಯಾಗಬೇಕಿದ್ದ ʼದಿ ಕೇರಳ ಸ್ಟೋರಿ ೨ʼ ಚಿತ್ರದ ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ಗುರುವಾರ ತಡೆ ನೀಡಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಬಂದಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ಚಿತ್ರವನ್ನು ಅದರ ನಿಗದಿತ ಬಿಡುಗಡೆ ದಿನಾಂಕವಾದ ಫೆಬ್ರವರಿ ೨೭ರಂದು ಬಿಡುಗಡೆ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸೆನ್ಸಾರ್ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ನ್ಯಾಯಾಲಯ, ಮಂಡಳಿ ನಿಯಮಾನುಸಾರ ಕಾರ್ಯನಿರ್ವಹಿಸಿದ್ದೇ ಎಂಬ ಕುರಿತು ಸಂಶಯ ವ್ಯಕ್ತಪಡಿಸಿತು. “ಮಂಡಳಿಯು ತನ್ನ ವಿವೇಚನೆಯನ್ನು ಸಮರ್ಪಕವಾಗಿ ಅನ್ವಯಿಸಿರುವುದು ಕಾಣುತ್ತಿಲ್ಲ,” ಎಂದು ಪೀಠ ತೀಕ್ಷ್ಣವಾಗಿ ಅಭಿಪ್ರಾಯಪಟ್ಟಿತು.

ಈ ವಾರದ ಆರಂಭದಲ್ಲಿ ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ ಅರ್ಜಿದಾರರು ವ್ಯಕ್ತಪಡಿಸಿದ ಕಳವಳಗಳು “ಬಹುಶಃ ನಿಜವಾಗಿರಬಹುದು” ಎಂದು ನ್ಯಾಯಾಲಯ ಸೂಚಿಸಿತ್ತು.

ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನ ಹಾಗೂ ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ, ಯುವ ಹಿಂದೂ ಮಹಿಳೆಯರನ್ನು ಅಂತರಧರ್ಮೀಯ ವಿವಾಹಗಳಿಗೆ ಆಮಿಷವೊಡ್ಡಿ ನಂತರ ಹಲ್ಲೆ ನಡೆಸಿ, ಹಕ್ಕುಗಳನ್ನು ಕಸಿದುಕೊಂಡು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲಾಗುತ್ತದೆ ಎಂಬ ಕಥಾವಸ್ತು ಇರುವುದಾಗಿ ಹೇಳಲಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಕಥಾಹಂದರವು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕೇರಳವನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಜೀವಶಾಸ್ತ್ರಜ್ಞ ಶ್ರೀದೇವ್ ನಂಬೂದಿರಿ ಅವರು, ಚಿತ್ರದ ಕಥಾಹಂದರವು ರಾಜ್ಯದ ಸಾಮಾಜಿಕ ಸೌಹಾರ್ದತೆಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಅರ್ಜಿಯ ಮೇರೆಗೆ ನ್ಯಾಯಾಲಯ ಈ ವಿಚಾರವನ್ನು ಕೈಗೆತ್ತಿಕೊಂಡಿದೆ.

ಅರ್ಜಿಯ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಹಾಗೂ ಚಿತ್ರದ ನಿರ್ಮಾಪಕರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಇದರ ನಡುವೆ, ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಉನ್ನತ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಳಂಬವಿಲ್ಲದೆ ವಿಚಾರಣೆ ನಡೆಸುವಂತೆ ಹಾಗೂ ವಿವರವಾದ ಆದೇಶವನ್ನು ತ್ವರಿತವಾಗಿ ಪ್ರಕಟಿಸುವಂತೆ ಕೋರಲಾಗಿದೆ ಎನ್ನಲಾಗಿದೆ. ಫೆಬ್ರವರಿ ೨೭ರ ಬಿಡುಗಡೆ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು, ಚಿತ್ರಮಂದಿರಗಳ ಯೋಜನೆಗಳಿಗೆ ಅಡ್ಡಿಯಾಗದಂತೆ ತಾತ್ಕಾಲಿಕ ಆದೇಶ ಕೋರುವ ಸಾಧ್ಯತೆಯೂ ಇದೆ.

Advertisement

LEAVE A REPLY

Please enter your comment!
Please enter your name here