
ಬೆಂಗಳೂರು, ಫೆ. 25:ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ೧,೬೦೦ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಮಂಗಳವಾರ **ಬೆಂಗಳೂರು**ಯ ಬನ್ನೇರುಘಟ್ಟ ರಸ್ತೆಯ ಆರ್.ಎ. ಮುಂಡ್ಕುರ್ ಅಗ್ನಿಶಾಮಕ ತರಬೇತಿ ಅಕಾಡಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ, ಗೃಹರಕ್ಷಕ ದಳ, ಪೌರರಕ್ಷಣೆ ಹಾಗೂ ಎಸ್ಡಿಆರ್ಎಫ್‌ನ ಅಧಿಕಾರಿ–ಸಿಬ್ಬಂದಿಗೆ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಮಾಡಲಾಯಿತು. ಜೊತೆಗೆ ೪೦ ಹೊಸ ಅಗ್ನಿಶಾಮಕ ಜಲ ವಾಹನಗಳನ್ನು ಇಲಾಖೆಗೆ ಹಸ್ತಾಂತರಿಸಲಾಯಿತು.
ರಾಜ್ಯದ ೧೫ ಹೊಸ ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಗೃಹ ಸಚಿವರು ತಿಳಿಸಿದರು. ಪೊಲೀಸ್ ಗೃಹ ಯೋಜನೆಯಡಿ ೪೦ ಸಾವಿರ ಮನೆಗಳನ್ನು ನಿರ್ಮಿಸಿರುವ ಮಾದರಿಯಲ್ಲೇ ಅಗ್ನಿಶಾಮಕ ಸಿಬ್ಬಂದಿಗೂ ವಸತಿ ಗೃಹ ಕಲ್ಪಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ ಅಗತ್ಯ ಹಣ ಒದಗಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗ್ನಿ ಅವಘಡಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆಧುನಿಕ ಮತ್ತು ಸುಸಜ್ಜಿತ ಉಪಕರಣಗಳು ಹಾಗೂ ವಾಹನಗಳನ್ನು ಒದಗಿಸಲಾಗಿದೆ. ಪ್ರಥಮ ಬಾರಿಗೆ ೯೦ ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್‌ಫಾರ್ಮ್ ಮಾದರಿಯ ಅಗ್ನಿಶಾಮಕ ವಾಹನವನ್ನು ಪರಿಚಯಿಸಲಾಗಿದೆ ಎಂದರು.
೧೫ನೇ ಹಣಕಾಸು ಆಯೋಗದ ಯೋಜನೆಯಡಿ ೩೨೯ ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ೨೧ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ೯೮ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆಧುನಿಕ ಉಪಕರಣಗಳ ಖರೀದಿ ಹಾಗೂ ತರಬೇತಿ ಕೇಂದ್ರಗಳ ಉನ್ನತೀಕರಣಕ್ಕೂ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಉತ್ತಮ ಕಾರ್ಯನಿರ್ವಹಣೆಯಿಂದ ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಪಡೆದಿದೆ. ವಿಪತ್ತಿನ ಸಂದರ್ಭದಲ್ಲಿ ಶಿಸ್ತಿನೊಂದಿಗೆ ಸ್ವಯಂಸ್ಪೂರ್ತಿಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಯನ್ನು ಸಮಾಜ ಗುರುತಿಸಿದೆ. ಇಡೀ ದೇಶಕ್ಕೆ ಕರ್ನಾಟಕದ ಅಗ್ನಿಶಾಮಕ ಹಾಗೂ ತುರ್ತುಸೇವಾ ವ್ಯವಸ್ಥೆ ಮಾದರಿಯಾಗಿದೆ ಎಂದು ಗೃಹ ಸಚಿವರು ಶ್ಲಾಘಿಸಿದರು.





