
ನವದೆಹಲಿ, ಫೆ.22:ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಮತ್ತು ಬಾಂಗ್ಲಾದೇಶದ ಸಂಪರ್ಕ ಹೊಂದಿದ್ದ ಎಂಟು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉಡುಪು ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಮಿಜಾನೂರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಹಾಗೂ ಮೊಹಮ್ಮದ್ ಉಜ್ಜಲ್ ಎಂಬ ಆರು ಮಂದಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದ್ದು, ಉಳಿದ ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಬಾಂಗ್ಲಾದೇಶದ ನಾಗರಿಕನೂ ಇದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಗುರುತಿನ ಚೀಟಿಗಳಿಗಾಗಿ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿದ್ದು, ಅವರಿಂದ ಎಂಟು ಮೊಬೈಲ್ ಫೋನ್‌ಗಳು ಹಾಗೂ 16 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಶಂಕಿತರನ್ನು ತಮಿಳುನಾಡು ಪೊಲೀಸರು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ದೆಹಲಿಯ ಕೆಂಪು ಕೋಟೆ ಹಾಗೂ ಚಾಂದನಿ ಚೌಕ್ ಪ್ರದೇಶದಲ್ಲಿನ ದೇವಾಲಯ ಸೇರಿದಂತೆ ದೇಶದ ವಿವಿಧ ಪ್ರಮುಖ ಧಾರ್ಮಿಕ ಸ್ಥಳಗಳ ಬಳಿ ಸ್ಫೋಟ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಎಚ್ಚರಿಕೆಯ ಬೆನ್ನಲ್ಲೇ ಈ ಬಂಧನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ದೇಶದ ಅನೇಕ ಭಾಗಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಯೋಜಿಸುತ್ತಿರುವ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಕುರಿತು ಲಭಿಸಿದ್ದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.





