ಪಶ್ಚಿಮ ಬಂಗಾಳದ ಆರು ನ್ಯಾಯಾಲಾಯಕ್ಕೆ ಬಾಂಬ್ ಬೆದರಿಕೆ!

0
5
Advertisement

ಕೋಲ್ಕತಾ, ಫೆ. 25: ಬಾಂಬ್ ಇಡಲಾಗಿದೆ ಎಂಬ ಇಮೇಲ್ ಮೂಲಕ ಬಂದ ಬೆದರಿಕೆಗಳ ಹಿನ್ನೆಲೆಯಲ್ಲಿ, ಕೋಲ್ಕತಾದ ಎರಡು ನ್ಯಾಯಾಲಯಗಳು ಸೇರಿದಂತೆ ಪಶ್ಚಿಮ ಬಂಗಾಳದ ಕನಿಷ್ಠ ಆರು ಜಿಲ್ಲಾ ನ್ಯಾಯಾಲಯಗಳಲ್ಲಿ ಮಂಗಳವಾರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು.

ಮಧ್ಯ ಕೋಲ್ಕತಾದ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯ ಹಾಗೂ ಬ್ಯಾಂಕ್ಸ್ಹಾಲ್ ನ್ಯಾಯಾಲಯಗಳಿಗೆ ಬಾಂಬ್ ಪತ್ತೆ ನಾಯಿ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ತಕ್ಷಣವೇ ನಿಯೋಜಿಸಲಾಯಿತು. ನ್ಯಾಯಾಲಯಗಳ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್‌ಗಳು ಹೂಗ್ಲಿ ಜಿಲ್ಲೆಯ ಚಿನ್ಸುರಾ, ಪಶ್ಚಿಮ ಬರ್ಧಮಾನ ಜಿಲ್ಲೆಯ ಅಸನ್ಸೋಲ್ ಮತ್ತು ದರ್ಗಾಪುರ, ಹಾಗು ಮುರ್ಷಿದಾಬಾದ್ ಜಿಲ್ಲೆಯ ರಾಂಪುರ ನ್ಯಾಯಾಲಯಗಳಿಗೂ ಬಂದಿವೆ. ಈ ಎಲ್ಲ ಕಡೆಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಸಕ್ತ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವೇಳೆ ತಮ್ಮ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸುಮಾರು ೬೦ ಲಕ್ಷ ಮತದಾರರು ತಕರಾರು ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಅರ್ಜಿಗಳ ಇತ್ಯರ್ಥಕ್ಕಾಗಿ ಜಿಲ್ಲಾ ನ್ಯಾಯಾಲಯಗಳಿಗೆ ಹೆಚ್ಚುವರಿ ನ್ಯಾಯಾಧೀಶರನ್ನು ನಿಯೋಜಿಸುವ ಅಗತ್ಯವಿದೆ. ಈ ಸಂಬಂಧ ಮಂಗಳವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಪಶ್ಚಿಮ ಬಂಗಾಳದ ೨೫೦ ಹಾಲಿ ಹಾಗೂ ನಿವೃತ್ತ ನ್ಯಾಯಾಧೀಶರ ಜೊತೆಗೆ ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳ ನ್ಯಾಯಾಧೀಶರನ್ನೂ ನಿಯೋಜಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ಸೂಚನೆಯ ಕೆಲವೇ ಸಮಯದ ಬಳಿಕ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಹಿನ್ನೆಲೆ ಮತ್ತು ಇಮೇಲ್ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ವಿಭಾಗದ ಸಹಕಾರದೊಂದಿಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here