
ಬೆಂಗಳೂರು ಫೆ.19: ಸುಮಾರು 100 ದಿನಗಳ ವಿರಾಮದ ಬಳಿಕ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸೇವೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸಫಾರಿ ಪುನರಾರಂಭಕ್ಕೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಅನುಮೋದನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಸಿಬ್ಬಂದಿ ಹಾಗೂ ವಾಹನಗಳ ದುರುಪಯೋಗ ತಡೆಗಟ್ಟಲು ಮತ್ತು ಇತರ ಪ್ರಮುಖ ಅರಣ್ಯ ಕಾರ್ಯಗಳಿಗೆ ಒತ್ತು ನೀಡುವ ಉದ್ದೇಶದಿಂದ ನವೆಂಬರ್ 7ರಿಂದ ಸಫಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕಟ್ಟುನಿಟ್ಟಿನ ನಿಯಮಾವಳಿಗಳೊಂದಿಗೆ ಸಫಾರಿಗೆ ಮರು ಅನುಮತಿ ನೀಡಲಾಗಿದೆ.
ಪ್ರಾಯೋಗಿಕ ಹಂತದಲ್ಲಿ ದಿನಕ್ಕೆ ಗರಿಷ್ಠ 50 ಸಫಾರಿ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿ, ಸಫಾರಿ ಬಸ್‌ಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಬಂಡಿಪುರದಲ್ಲಿ ಈ ಹಿಂದೆ ದಿನಕ್ಕೆ 8 ಗಂಟೆಗಳ ಕಾಲ ನಡೆಯುತ್ತಿದ್ದ ಸಫಾರಿಯನ್ನು 5 ಗಂಟೆಗೆ ಕಡಿತಗೊಳಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಮತ್ತು ನಾಗರಹೊಳೆಯಲ್ಲಿ 4 ಗಂಟೆಗಳ ಕಾಲ ಮಾತ್ರ ಮೊದಲ ಹಂತದಲ್ಲಿ ಸಫಾರಿಗೆ ಅವಕಾಶ ನೀಡಲಾಗಿದೆ.
ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಅಥವಾ ಹೆಚ್ಚುವರಿ ಅವಧಿಗೆ ಬಳಸುವಂತಹ ದುರ್ಬಳಕೆಯನ್ನು ತಡೆಯಲು, ಮುಂದಿನ ಎರಡು ತಿಂಗಳೊಳಗೆ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಹಾಗೂ ಡ್ಯಾಷ್ ಕ್ಯಾಮ್ ಅಳವಡಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಭಾರತೀಯ ವನ್ಯಜೀವಿ ಸಂಸ್ಥೆ, ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಮತ್ತು ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿಯ ವರದಿಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ತಿಂಗಳ ಪ್ರಯೋಗಾತ್ಮಕ ಅವಧಿಯಲ್ಲಿ ಸಫಾರಿಗಳನ್ನು ಹಂತ ಹಂತವಾಗಿ ತೆರೆಯಲಾಗುತ್ತಿದ್ದು, ಅದರ ಪರಿಣಾಮಗಳನ್ನು ಸಮಿತಿ ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಲಿದೆ. ಈ ವರದಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅವರ ಸಲಹೆಗಳ ಆಧಾರದಲ್ಲಿ ಅನುಮತಿಸಲಾದ ವಾಹನಗಳ ಸಂಖ್ಯೆಯ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಸಫಾರಿ ಸ್ಥಗಿತಗೊಂಡಿದ್ದ ಅಕ್ಟೋಬರ್–ನವೆಂಬರ್ 2025 ಅವಧಿಯಲ್ಲಿ 28 ಹುಲಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದ್ದು, ಅವುಗಳಲ್ಲಿ 13 ವಯಸ್ಕ ಹುಲಿಗಳಾಗಿವೆ. ಸಂಘರ್ಷ ಪ್ರದೇಶಗಳಲ್ಲಿ ಗ್ರಾಮ ಮಟ್ಟದ ಇಕೋ-ಡೆವಲಪ್‌ಮೆಂಟ್ ಸಮಿತಿಗಳನ್ನು ಪುನರುಜ್ಜೀವನಗೊಳಿಸುವುದಕ್ಕೂ ನಿರ್ಧಾರ ಕೈಗೊಳ್ಳಲಾಗಿದೆ. ಬಂಡಿಪುರದ ಸುಮಾರು 100 ಕಿ.ಮೀ ಅರಣ್ಯ ಗಡಿಯಲ್ಲಿನ ಸಂಘರ್ಷ ಪ್ರದೇಶಗಳಲ್ಲಿ ವಿಶೇಷ ನಾಲ್ಕು ಸದಸ್ಯರ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಸಫಾರಿ ಆದಾಯದ ಮೂರನೇ ಒಂದು ಭಾಗವನ್ನು ಅರಣ್ಯ ಅಂಚಿನ ಗ್ರಾಮಗಳಲ್ಲಿ ಜಾಗೃತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.





