ಬಾಗಲಕೋಟೆ; ಜೀತಕ್ಕಿದ್ದ ಒಡಿಶಾ ಮೂಲದ ಕಾರ್ಮಿಕರ ರಕ್ಷಣೆ!

0
37

ಬಾಗಲಕೋಟೆ ಫೆ.13: ಜಿಲ್ಲೆಯ ಸಂಕ್ಲಾಪೂರ ಗ್ರಾಮ ವ್ಯಾಪ್ತಿಯ ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕೆ ಒಳಗಾಗಿದ್ದ ಒಡಿಶಾ ಮೂಲದ ಐವರು ಬಾಲಕಾರ್ಮಿಕರು ಸೇರಿದಂತೆ ಒಟ್ಟು 25 ಕಾರ್ಮಿಕರನ್ನು ರಕ್ಷಿಸಿ ಜೀತಮುಕ್ತಗೊಳಿಸಿದ ಘಟನೆ ನಡೆದಿದೆ.

ಸರ್ಕಾರೇತರ ಸಂಸ್ಥೆಯಿಂದ ಬಂದ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಅಮರೇಶ್ ಪಮ್ಮಾರ್ ನೇತೃತ್ವದ ತಂಡವು ಇಟ್ಟಿಗೆ ಭಟ್ಟಿಗೆ ಅನಿರೀಕ್ಷಿತ ದಾಳಿ ನಡೆಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು.

ದಾಳಿಯ ವೇಳೆ ಅಧಿಕಾರಿಗಳು ಒಟ್ಟು 34 ಜೀತದಾಳುಗಳನ್ನು ಬಿಡುಗಡೆ ಮಾಡಿದ್ದು, ಅವರಲ್ಲಿ ಐದು ಮಂದಿ ಬಾಲಕಾರ್ಮಿಕರು ಮತ್ತು ಶಾಲೆ ತೊರೆದು ಕೆಲಸ ಮಾಡುತ್ತಿದ್ದ ಒಂಬತ್ತು ಮಕ್ಕಳು ಪತ್ತೆಯಾಗಿದ್ದಾರೆ. ಮಕ್ಕಳನ್ನು ಅಪಾಯಕರ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಬಳಸಲಾಗುತ್ತಿತ್ತು ಎಂಬುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಗ್ರಾಮೀಣ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಸತ್ತಿಗೌಡ, ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಮುತ್ತಣ್ಣ, ಕಾರ್ಮಿಕ ಕಲ್ಯಾಣ ಅಧಿಕಾರಿ ರಾಕೇಶ್ ಶಿರಕನಹಳ್ಳಿ, ಕಂದಾಯ ನಿರೀಕ್ಷಕ ಬೋರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರಕ್ಷಣೆಯ ನಂತರ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಮಕ್ಕಳ ಕಾರ್ಮಿಕ ಮತ್ತು ಜೀತದಾಳು ನಿಯಂತ್ರಣ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರ ಶೋಷಣೆ ಸಂಬಂಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ರಕ್ಷಿಸಲಾದ ಕಾರ್ಮಿಕರನ್ನು ಬಾಗಲಕೋಟೆಗೆ ಕರೆತರಲಾಗಿದ್ದು, ನಂತರ ಅವರನ್ನು ಒಡಿಶಾದಲ್ಲಿನ ತಮ್ಮ ಸ್ವಂತ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here