
ಲೇಖನ: ಶಿವಪ್ರಸಾದ್ ಮಣಿಯೂರು
ಇಂದಿನ ಕಾರ್ಪೊರೇಟ್ ಲೋಕದಲ್ಲಿ “ಎಚ್.ಆರ್.” (Human Resource) ಎಂಬ ಪದವು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಸಂಸ್ಥೆಯ ಒಂದು ಪ್ರಮುಖ ಅಂಗವೆಂದು ಗುರುತಿಸಲ್ಪಡುವ ಈ ವಿಭಾಗವು, ಕೆಲಸಗಾರರ ಆಯ್ಕೆ, ತರಬೇತಿ, ವೇತನ ವ್ಯವಸ್ಥೆ ಮತ್ತು ಸಂಸ್ಥೆಯ ಒಳಾಂಗಣ ವ್ಯವಸ್ಥೆಗಳನ್ನು ನಿರ್ವಹಿಸುವ ಹೊಣೆ ಹೊತ್ತಿರುತ್ತದೆ. ಆದರೆ, ಇತ್ತೀಚಿನ ಅನುಭವಗಳು ಮತ್ತು ವಾಸ್ತವಿಕತೆಗಳನ್ನು ಗಮನಿಸಿದಾಗ, ಒಂದು ಮೂಲಭೂತ ಪ್ರಶ್ನೆ ಮೂಡುವುದು ಸಹಜ. ಈ ಎಚ್.ಆರ್. ವಿಭಾಗ ನಿಜವಾಗಿಯೂ “ಮಾನವ ಸಂಪನ್ಮೂಲ”ವನ್ನು ಮಾನವೀಯವಾಗಿ ನೋಡುತ್ತಿದೆಯೇ, ಅಥವಾ ಕೇವಲ ನಿಯಮ-ನಿಬಂಧನೆಗಳ ಪಾಲನೆಗಳಿಗೆ ಮಾತ್ರ ಸೀಮಿತವಾಗಿದೆಯೇ?!
ಒಬ್ಬ ಯುವಕ ಅಥವಾ ಉದ್ಯೋಗಾಕಾಂಕ್ಷಿ ಹೊಸ ಸಂಸ್ಥೆಗೆ ಕಾಲಿಡುವಾಗ, ಅವನು ತನ್ನ ಕನಸುಗಳು, ಆಸೆಗಳು ಮತ್ತು ಭವಿಷ್ಯದ ಗುರಿಗಳನ್ನು ಹೊತ್ತು ಬರುತ್ತಾನೆ. ಸಾವಿರಾರು ಅಭ್ಯರ್ಥಿಗಳ ನಡುವೆ ಸ್ಪರ್ಧಿಸಿ, ವಿವಿಧ ಹಂತದ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ದಾಟಿ, ಅವನು ಆ ಕೆಲಸವನ್ನು ಪಡೆದುಕೊಳ್ಳುತ್ತಾನೆ. ಇದು ಅವನ ಜೀವನದ ಒಂದು ಮಹತ್ವದ ಸಾಧನೆಯಾಗಿರುತ್ತದೆ. ಆದರೆ, ಕೆಲಸಕ್ಕೆ ಸೇರಿದ ನಂತರ ಅವನಿಗೆ ದೊರೆಯಬೇಕಾದ ಮೂಲಭೂತ ಗೌರವ ಮತ್ತು ಭದ್ರತೆ; ವಿಶೇಷವಾಗಿ ಸಮಯಕ್ಕೆ ಸರಿಯಾದ ವೇತನ, ಇವೆಲ್ಲವೂ ಪ್ರಶ್ನಾರ್ಥಕವಾಗಿಬಿಟ್ಟರೆ, ಅವನ ಉತ್ಸಾಹ ನಿಧಾನವಾಗಿ ಕುಸಿಯುತ್ತದೆ.
ಕೆಲವು ಸಂಸ್ಥೆಗಳಲ್ಲಿ, ಎಚ್.ಆರ್.ಗಳು ಕಟ್ಟುನಿಟ್ಟಿನ ನಿಯಮಗಳನ್ನು ಮುಂದಿಟ್ಟು, ಕೆಲಸಗಾರರನ್ನು ಅನಗತ್ಯವಾಗಿ ಸತಾಯಿಸುವುದು ಕಂಡುಬರುತ್ತದೆ. ಕೆಲವೊಮ್ಮೆ ಸಂದರ್ಶನದಲ್ಲೇ “ಮೊದಲ ತಿಂಗಳ ವೇತನವಿಲ್ಲ” ಎಂಬ ಹೇಳಿಕೆಗಳು ಕೇಳಿಬರುತ್ತವೆ. ದುಡಿದ ನಂತರ ತನ್ನ ಸಂಬಳದ ಬಗ್ಗೆ ವಿಚಾರಿಸಿದಾಗ, “ನಂತರ ನೋಡೋಣ” ಎಂಬ ನಿರ್ಲಕ್ಷ್ಯ ಉತ್ತರ ಸಿಗುವುದು, ಕೆಲಸಗಾರನ ಮನೋಭಾವಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಇಂತಹ ನಡೆ, ಕೇವಲ ಆಡಳಿತಾತ್ಮಕ ಕೊರತೆಯಲ್ಲ, ಮಾನವೀಯತೆಯ ಕೊರತೆಯನ್ನೂ ತೋರಿಸುತ್ತದೆ.
ಎಚ್.ಆರ್. ಎಂದರೆ ಕೇವಲ ನೇಮಕಾತಿ ಪ್ರಕ್ರಿಯೆ ನಡೆಸುವುದು ಮಾತ್ರವಾ? ಸಂದರ್ಶನಕ್ಕೆ ಬಂದ ಅಭ್ಯರ್ಥಿಗೆ ತಕ್ಷಣ ಸ್ಪಷ್ಟ ಉತ್ತರ ನೀಡದೆ, “ವಿ ವಿಲ್ ಕಾಲ್ ಯು” ಎಂದು ಹೇಳಿ ಅವನಲ್ಲಿ ತಪ್ಪು ನಿರೀಕ್ಷೆ ಹುಟ್ಟಿಸುವುದು, ಒಂದು ರೀತಿಯ ಭಾವನಾತ್ಮಕ ಶೋಷಣೆ ಅಲ್ಲವೇ? ಪ್ರತಿಭೆಯನ್ನು ಗುರುತಿಸುವುದು ಮಾತ್ರವಲ್ಲ, ಅದನ್ನು ಬೆಳೆಸುವ ಜವಾಬ್ದಾರಿಯೂ ಎಚ್.ಆರ್.ಗಳ ಮೇಲಿದೆ. ಆದರೆ, ಕೆಲಸಗಾರನ ಶ್ರಮ, ಕಷ್ಟಗಳು, ಮತ್ತು ಅವನಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ವಿಚಾರಿಸುವ ಮನೋಭಾವ ಎಲ್ಲಿದೆ?
ಇಂದಿನ ಪರಿಸ್ಥಿತಿಯಲ್ಲಿ, ಕೆಲಸಗಾರನ ಹಾಜರಾತಿ, ಸಮಯಪಾಲನೆ, ಯೂನಿಫಾರ್ಮ್ ಇತ್ಯಾದಿಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆದರೆ, ಅವನ ನಿಷ್ಠೆ, ದುಡಿಮೆ ಮತ್ತು ಸಾಧನೆಗಳನ್ನು ಮೆಚ್ಚುವ ಸಂಸ್ಕೃತಿ ಕಾಣುವುದಿಲ್ಲ. ಕೆಲಸಗಾರನ ಅಭಿವೃದ್ಧಿಗೆ ತರಬೇತಿ ನೀಡುವುದು ಮಾತ್ರವಲ್ಲ, ಅವನ ವೈಯಕ್ತಿಕ ಮತ್ತು ಮಾನವೀಯ ಬೆಳವಣಿಗೆಯನ್ನೂ ಉತ್ತೇಜಿಸುವುದು ಮುಖ್ಯ. ಆದರೆ, ಈ ಅಂಶ ಬಹುತೇಕ ಕಡೆಗಳಲ್ಲಿ ನಿರ್ಲಕ್ಷ್ಯಗೊಳ್ಳುತ್ತಿದೆ.
ಸಂಸ್ಥೆಯಲ್ಲಿನ ಉತ್ತಮ ಬಾಂಧವ್ಯ ನಿರ್ಮಾಣವು ಎಚ್.ಆರ್.ಗಳ ಪ್ರಮುಖ ಕರ್ತವ್ಯವಾಗಿರಬೇಕು. ಆದರೆ, ಕೆಲಸಗಾರರ ಸಮಸ್ಯೆಗಳು, ಅವರ ಶ್ರಮಕ್ಕೆ ತಕ್ಕ ಪ್ರತಿಫಲ, ಮತ್ತು ಆಡಳಿತ ವ್ಯವಸ್ಥೆಯ ನ್ಯಾಯಸಮ್ಮತತೆ—ಇವುಗಳ ಬಗ್ಗೆ ವಿಚಾರಿಸುವ ಮನೋಭಾವ ಅಪರೂಪವಾಗುತ್ತಿದೆ. ಹಾಜರಾತಿ ಪರಿಶೀಲಿಸಿ ವೇತನ ನೀಡುವುದೇ ಎಚ್.ಆರ್.ಗಳ ಪ್ರಮುಖ ಕರ್ತವ್ಯವೆಂದು ಪರಿಗಣಿಸುವ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ, ನಿಜವಾದ ಶ್ರಮಕ್ಕಿಂತಲೂ ಮೇಲ್ನೋಟದ ಮಾತುಗಳು ಮತ್ತು ಪ್ರಚಾರಗಳಿಗೆ ಹೆಚ್ಚು ಮೌಲ್ಯ ಸಿಗುತ್ತಿರುವ ಕಾಲದಲ್ಲಿದ್ದೇವೆ. ದುಡಿದವನಿಗೆ ನ್ಯಾಯ ಸಿಗದೆ, ಮಾತಿನ ಕೌಶಲ್ಯಕ್ಕೆ ಪ್ರೋತ್ಸಾಹ ಸಿಗುವ ಪರಿಸ್ಥಿತಿ, ಸಂಸ್ಥೆಗಳ ಭವಿಷ್ಯಕ್ಕೂ ಅಪಾಯಕಾರಿಯಾಗಿದೆ.
ಒಟ್ಟಿನಲ್ಲಿ, ಎಚ್.ಆರ್. ವಿಭಾಗವು ತನ್ನ ಮೂಲ ಧ್ಯೇಯವಾದ “ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ಕಲ್ಯಾಣ”ವನ್ನು ಮರೆಯಬಾರದು. ನಿಯಮಗಳ ಪಾಲನೆ ಮುಖ್ಯವಾದರೂ, ಅದಕ್ಕಿಂತ ಮುಖ್ಯವಾದುದು ಮಾನವೀಯತೆ. ಕೆಲಸಗಾರನನ್ನು ಕೇವಲ ಒಂದು ಸಂಪನ್ಮೂಲವಾಗಿ ಅಲ್ಲ, ಒಂದು ವ್ಯಕ್ತಿಯಾಗಿ ನೋಡುವ ಮನೋಭಾವ ಬೆಳೆಸಿದಾಗ ಮಾತ್ರ ಸಂಸ್ಥೆಯೂ, ಸಮಾಜವೂ ಸಮತೋಲನದಿಂದ ಬೆಳೆಯಲು ಸಾಧ್ಯ.





