ಆನ್‌ಲೈನ್‌ ಗೇಮಿಂಗ್‌ ಚಟ; ಮಕ್ಕಳ ಭವಿಷ್ಯಕ್ಕೆ ದೊಡ್ಡ ಸವಾಲು!

0
3
Advertisement

ಲೇಖನ: ಶಿವಪ್ರಸಾದ್‌ ಮಣಿಯೂರು

ಡಿಜಿಟಲ್‌ ಯುಗದಲ್ಲಿ ಆನ್‌ಲೈನ್‌ ಗೇಮಿಂಗ್‌ ಮನರಂಜನೆಯ ಒಂದು ಸಾಧನವಾಗಿ ಆರಂಭವಾದರೂ, ಇತ್ತೀಚಿನ ದಿನಗಳಲ್ಲಿ ಅದು ವಿದ್ಯಾರ್ಥಿಗಳು ಹಾಗೂ ಯುವಜನಾಂಗದ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಅಪಾಯಕಾರಿ ಚಟವಾಗಿ ರೂಪುಗೊಂಡಿದೆ. ಧಾರವಾಡದಲ್ಲಿ ನಡೆದ ಯುವಕನ ಆತ್ಮಹತ್ಯೆ ಪ್ರಕರಣವು ಈ ಸಮಸ್ಯೆಯ ತೀವ್ರತೆಯನ್ನು ಮತ್ತೊಮ್ಮೆ ಸಮಾಜದ ಮುಂದಿಟ್ಟಿದೆ. ಇದಕ್ಕೂ ಮುನ್ನ ಗಾಜಿಯಾಬಾದ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ದುರ್ಘಟನೆಗಳು, ಆನ್‌ಲೈನ್‌ ಗೇಮಿಂಗ್‌ ವ್ಯಸನವು ಕೇವಲ ವ್ಯಕ್ತಿಗಷ್ಟೇ ಅಲ್ಲ, ಕುಟುಂಬ ಹಾಗೂ ಸಮಾಜವನ್ನೇ ಬೆಚ್ಚಿಬೀಳಿಸುವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಸ್ಮಾರ್ಟ್‌ಫೋನ್‌, ಇಂಟರ್‌ನೆಟ್‌ ಹಾಗೂ ಸುಲಭವಾಗಿ ಲಭ್ಯವಾಗುವ ಆನ್‌ಲೈನ್‌ ಗೇಮ್ಸ್‌ಗಳು ಮಕ್ಕಳ ಮತ್ತು ಯುವಕರನ್ನು ತ್ವರಿತವಾಗಿ ಸೆಳೆಯುತ್ತಿವೆ. ಆರಂಭದಲ್ಲಿ ಸಮಯ ಕಳೆಯುವ ಆಟವಾಗಿ ಕಾಣಿಸುವ ಗೇಮಿಂಗ್‌, ಹಂತ ಹಂತವಾಗಿ ವ್ಯಸನವಾಗಿ ಮಾರ್ಪಡುತ್ತದೆ. ಗೆಲ್ಲುವ ಉತ್ಸಾಹ, ಹಂತಗಳನ್ನು ದಾಟುವ ತವಕ, ವರ್ಚುವಲ್‌ ಲೋಕದಲ್ಲಿ ಸಿಗುವ ತಾತ್ಕಾಲಿಕ ಸಂತೋಷ— ಎಲ್ಲವೂ ಇವು ಯುವ ಮನಸ್ಸನ್ನು ನೈಜ ಜೀವನದಿಂದ ದೂರ ಮಾಡುತ್ತಿವೆ. ಪರಿಣಾಮವಾಗಿ ಓದು, ಕುಟುಂಬ ಸಂಬಂಧ, ಆರೋಗ್ಯ ಹಾಗೂ ಸಾಮಾಜಿಕ ಜೀವನ ಹಿನ್ನಲೆಯಲ್ಲಿ ಸರಿಯುತ್ತಿದೆ.

ವಿದ್ಯಾರ್ಥಿಗಳ ವಿಷಯದಲ್ಲಿ ಇದರ ಪರಿಣಾಮ ಇನ್ನಷ್ಟು ಗಂಭೀರವಾಗಿದೆ. ಓದಿನ ಮೇಲಿನ ಆಸಕ್ತಿ ಕುಸಿಯುವುದು, ನಿದ್ರಾಹೀನತೆ, ಏಕಾಂಗಿತನ, ಸಿಡುಕು- ಕೋಪ, ಡುಗುಡ ಮತ್ತು ಆತ್ಮವಿಶ್ವಾಸದ ಕೊರತೆ ಅನ್ನುವುದು ಸಾಮಾನ್ಯವಾಗುತ್ತಿದೆ. ಕೆಲವರು ಆಟದಲ್ಲಿ ಸೋಲು ಅಥವಾ ಅದರಿಂದ ಉಂಟಾಗುವ ಒತ್ತಡವನ್ನು ಸಹಿಸದೆ ತೀವ್ರ ಮಾನಸಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ದುಃಖಕರ ಸಂಗತಿಯೆಂದರೆ, ಈ ಒತ್ತಡದಿಂದ ಹೊರಬರಲು ಸಹಾಯ ಕೇಳುವ ಬದಲು, ಕೆಲವರು ತಪ್ಪು ದಾರಿಯನ್ನು ಆಯ್ಕೆ ಮಾಡುತ್ತಿರುವುದು ಬಹಳ ಆತಂಕಕಾರಿ.

ಪೋಷಕರ ಜವಾಬ್ದಾರಿ ಅತ್ಯಂತ ಮುಖ್ಯ

ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿದೆ. ಮಕ್ಕಳ ದಿನಚರಿಯಲ್ಲಿ ಆಗುವ ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸುವುದೇ ಮೊದಲ ಹೆಜ್ಜೆ. ಅತಿಯಾದ ಮೊಬೈಲ್‌ ಬಳಕೆ, ತಡರಾತ್ರಿಯವರೆಗೂ ಮಲಗದೇ ಇರುವುದು. ಓದಿನಲ್ಲಿನ ನಿರ್ಲಕ್ಷ್ಯ, ಏಕಾಂಗಿತನ, ಪ್ರವೃತ್ತಿಯಲ್ಲಿ ತಕ್ಷಣ ಕೋಪ ಸ್ವಭಾವ- ಇವುಗಳೆಲ್ಲ ಗೇಮಿಂಗ್‌ ವ್ಯಸನದ ಆರಂಭಿಕ ಲಕ್ಷಣಗಳಾಗಿರಬಹುದು. ಇವುಗಳನ್ನು ಹಗುರವಾಗಿ ಕಾಣದೆ ಸಮಯಕ್ಕೆ ಸರಿಯಾಗಿ ಗಮನಿಸುವುದು  ತೀರ ಅಗತ್ಯ.

ಇಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಪೋಷಕರು ಮುಕ್ತವಾಗಿ ಮಾತನಾಡುವುದು ಅತೀ ಮುಖ್ಯ. ʼಓದ್ತಾ ಇಲ್ಲವಾ?ʼ ಅನ್ನೋ ಪ್ರಶ್ನೆಗಳಿಗಿಂತ ʼನಿನಗೇನು ಇಷ್ಟ?ʼ,  ʼನೀನು ಏನೇನು ಆಟ ಆಡ್ತೀಯ ?ʼ, ʼಅದರಲ್ಲಿ ನಿನಗೇನು ಖುಷಿ?” ಎಂಬಂತಹ ಪ್ರಶ್ನೆಗಳು ಮಕ್ಕಳ ಮನಸ್ಸನ್ನು ತೆರೆದುಕೊಳ್ಳುವಂತೆ ಮಾಡುತ್ತವೆ. ಕಟ್ಟುನಿಟ್ಟಾದ ನಿಷೇಧ ಅಥವಾ ಗದರಿಕೆಯ ಬದಲು, ಗೇಮಿಂಗ್‌ನ ಪರಿಣಾಮಗಳ ಬಗ್ಗೆ ಸರಳವಾಗಿ ಅರಿವು ಮೂಡಿಸಬೇಕು. ನಂಬಿಕೆಯ ಸಂಬಂಧ ಬೆಳೆದರೆ ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಚ್ಚಿಡದೆ ಹಂಚಿಕೊಳ್ಳುತ್ತಾರೆ.

ಮಿತಿಯೇ ಪರಿಹಾರ, ನಿಷೇಧವಲ್ಲ!

ಮಕ್ಕಳ ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆಗೆ ಸ್ಪಷ್ಟ ಮಿತಿಯನ್ನು ನಿಗದಿಪಡಿಸುವುದು ಅತ್ಯಗತ್ಯ. ದಿನಕ್ಕೆ ಎಷ್ಟು ಸಮಯ ಗೇಮಿಂಗ್‌ ಮಾಡಬಹುದು ಎಂಬುದನ್ನು ಮನೆಯ ನಿಯಮವಾಗಿ ರೂಪಿಸಬೇಕು. ಪೋಷಕರು ತಾವೂ ಡಿಜಿಟಲ್‌ ಶಿಸ್ತು ಪಾಲಿಸಿದರೆ, ಮಕ್ಕಳು ಅದನ್ನು ಅನುಸರಿಸುವ ಸಾಧ್ಯತೆ ಹೆಚ್ಚು.

ಇದರೊಂದಿಗೆ ಮಕ್ಕಳನ್ನು ಕ್ರೀಡೆ, ಸಂಗೀತ, ಚಿತ್ರಕಲೆ, ಓದು, ಯೋಗ ಹಾಗೂ ಇತರ ಸೃಜನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು. ಇಂತಹ ಪರ್ಯಾಯ ಚಟುವಟಿಕೆಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಡಿಜಿಟಲ್‌ ಲೋಕದ ಮೇಲೆ ಇರುವ ಅವಲಂಬನೆಯನ್ನು ಕಡಿಮೆ ಮಾಡುತ್ತವೆ.

ಸಮಾಜ ಮತ್ತು ಸರ್ಕಾರದ ಪಾತ್ರವೂ ಅಗತ್ಯ

ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಗೇಮಿಂಗ್‌ ವ್ಯಸನ ಹಾಗೂ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ–ಕಾಲೇಜುಗಳಲ್ಲಿ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು ಬಲಪಡಿಸಿ, ಮಕ್ಕಳಿಗೆ ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡಬೇಕು. ಸರ್ಕಾರವೂ ಅಪಾಯಕಾರಿ ಆನ್‌ಲೈನ್‌ ಗೇಮ್ಸ್‌ಗಳ ಮೇಲೆ ನಿಯಂತ್ರಣ, ವಯೋಮಿತಿ ಜಾರಿ ಮತ್ತು ಡಿಜಿಟಲ್‌ ಶಿಸ್ತು ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಕಠಿಣವಾಗಿ ಜಾರಿಗೊಳಿಸಬೇಕಾಗಿದೆ.

ಆನ್‌ಲೈನ್‌ ಗೇಮಿಂಗ್‌  ಮಿತಿಯಿಲ್ಲದ ಬಳಕೆ ಅಪಾಯಕಾರಿಯಾಗಿದೆ. ಯುವಜನಾಂಗದ ಭವಿಷ್ಯ ನಮ್ಮ ಕೈಯಲ್ಲಿದೆ. ಪೋಷಕರು, ಶಿಕ್ಷಕರು ಮತ್ತು ಸಮಾಜ ಒಟ್ಟಾಗಿ ಎಚ್ಚೆತ್ತುಕೊಂಡರೆ, ಈ ಅಪಾಯಕಾರಿ ಹವ್ಯಾಸವನ್ನು ಕಿತ್ತೊಗೆಯಬಹುದು. ಅಲ್ಲದೆ ಅನೇಕ ಅಮೂಲ್ಯ ಜೀವಗಳನ್ನು ರಕ್ಷಿಸಬಹುದು. ಮನರಂಜನೆ ಬದುಕಿನ ಭಾಗವಾಗಲಿ; ಆದರೆ ಬದುಕೇ ಮನರಂಜನೆಯ ಭಾಗವಾಗಬಾರದು . ಎಲ್ಲವೂ ಮಿತಿಯಲ್ಲಿದ್ದರೇನೆ ಚಂದ.

Advertisement

LEAVE A REPLY

Please enter your comment!
Please enter your name here